ಆನೆಧಾಮಕ್ಕೆ ಕೇಂದ್ರದ ಸಮ್ಮತಿ ಸಿಗದಿದ್ದರೆ ಪರ್ಯಾಯ ಕ್ರಮ : ಈಶ್ವರ್ ಖಂಡ್ರೆ
ಬೆಳಗಾವಿ : ಮಾನವ-ಆನೆ ಸಂಘರ್ಷವನ್ನು ನಿಯಂತ್ರಿಸಲು ರಾಜ್ಯ ಸರಕಾರ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆನೆಧಾಮಕ್ಕೆ ಕೇಂದ್ರ ಸರಕಾರ ಇನ್ನೂ ತನ್ನ ಸಮ್ಮತಿ ನೀಡಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ವಿಧಾನಸಭೆಗಿಂದು ತಿಳಿಸಿದ್ದಾರೆ.
ನಿಯಮ 73ರಡಿಯಲ್ಲಿ ಶಾಸಕ ಎಚ್.ಕೆ. ಸುರೇಶ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಗಳ ಮೃದು ಧಾಮ ಮಾಡಲು ರಾಷ್ಟ್ರೀಯ ಹುಲಿ ಪ್ರಾಧಿಕಾರದ ಮತ್ತು ಕೇಂದ್ರದ ಅನುಮತಿ ಬೇಕು, ಒಂದೊಮ್ಮೆ ಕೇಂದ್ರ ಅನುಮತಿಸದಿದ್ದರೆ ಪರ್ಯಾಯ ಮಾರ್ಗದ ಚಿಂತನೆಯೂ ಸರಕಾರಕ್ಕಿದೆ ಎಂದರು.
ಪ್ರತಿ ವರ್ಷ ರಾಜ್ಯದಲ್ಲಿ 45 ರಿಂದ 50 ಜನರು ಮಾನವ ವನ್ಯಜೀವಿ ಸಂಘರ್ಷದಲ್ಲಿ ಸಾವಿಗೀಡಾಗುತ್ತಿದ್ದಾರೆ. ಇದು ನೋವಿನ ಸಂಗತಿ. ಈ ಪೈಕಿ ಆನೆ ದಾಳಿಯಿಂದ ಹೆಚ್ಚಿನ ಸಾವು ಸಂಭವಿಸುತ್ತಿದ್ದು, ಅದಕ್ಕಾಗಿಯೇ ಆನೆ ಧಾಮ ಮಾಡಲು ಸಂಪುಟದ ಅನುಮತಿ ಪಡೆದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಆನೆ-ಮಾನವ ಸಂಘರ್ಷ ತಗ್ಗಿಸಲು ರಾಜ್ಯ ಸರಕಾರ 428 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಾಡಿದೆ.1775 ಕಿ.ಮೀ ಆನೆ ಕಂದಕ ನಿರ್ಮಿಸಿದ್ದೇವೆ. 1361 ಕಿ.ಮೀ. ಸೌರ ಬೇಲಿ ಹಾಕಿದ್ದೇವೆ. ಆದರೆ ಹಾಸನದಲ್ಲಿ ಮತ್ತು ಕೊಡಗಿನಲ್ಲಿ ಹಲವು ವರ್ಷದಿಂದ ತಲಾ 100ಕ್ಕೂ ಹೆಚ್ಚು ಆನೆಗಳು ಕಾಡಿನಿಂದ ಹೊರಗಿವೆ. ಅಲ್ಲಿ ತೋಟ ಮತ್ತು ಕಾಡು ಒಂದೇ ರೀತಿ ಇದೆ ಎಂದರು.
ತಾವು ಸಚಿವರಾದ ತರುವಾಯ 8 ಬಾರಿ ಹಾಸನಕ್ಕೆ ಭೇಟಿ ನೀಡಿದ್ದು, ಆನೆ-ಮಾನವ ಸಂಘರ್ಷ ನಿಯಂತ್ರಿಸಲು ಸಾಕಷ್ಟು ಕ್ರಮ ಕೈಗೊಂಡಿದ್ದಾಗಿ ತಿಳಿಸಿದ ಅವರು, ಆನೆಗಳ ಕಾರಿಡಾರ್ ವಿಭಜನೆ ಆಗಿರುವುದು ಇದಕ್ಕೆ ಕಾರಣವಾಗಿದೆ. ಆದಾಗ್ಯೂ ರಾಜ್ಯ ಸರಕಾರ ರೈತರ ಬೆಳೆ ಹಾನಿ ಆಗದಂತೆ ಕ್ರಮ ಕೈಗೊಳ್ಳುತ್ತಿದೆ. ವನ್ಯಜೀವಿಗಳಿಂದ ಆಗಿರುವ ಬೆಳೆ ಹಾನಿಯ ಸಂಪೂರ್ಣ ಪರಿಹಾರ ನೀಡಲಾಗಿದೆ. ಯಾವುದೇ ಬಾಕಿ ಇರುವುದಿಲ್ಲ ಎಂದು ತಿಳಿಸಿದರು.
ಎಲ್ಲರೂ ಸೇರಿ ಮಾನವ- ವನ್ಯಜೀವಿ ಸಂಘರ್ಷಕ್ಕೆ ಒಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.