×
Ad

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವಿಧೇಯಕ ಮೇಲ್ಮನೆಯಲ್ಲಿ ಅಂಗೀಕಾರ

ವಿಧೇಯಕದಲ್ಲೇನಿದೆ..?

Update: 2025-12-19 15:17 IST

ಬೆಳಗಾವಿ : ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಅನುಸೂಚಿತ ಜಾತಿಗಳ(ಉಪ-ವರ್ಗೀಕರಣ) ವಿಧೇಯಕ-2025ಕ್ಕೆ ವಿಧಾನ ಪರಿಷತ್‍ನಲ್ಲಿ ಶುಕ್ರವಾರ ಅಂಗೀಕಾರ ದೊರಕಿತು.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಈ ವಿಧೇಯಕವನ್ನು ಪರ್ಯಾಲೋಚಿಸಿ, ಅಂಗಿಕರಿಸುವಂತೆ ಕೋರಿದರು. ವಿಧೇಯಕದ ಬಗ್ಗೆ ಪರಿಷತ್‍ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್, ಜಕ್ಕಪ್ಪನವರ್, ಶಾಂತರಾಮ ಬುಡ್ನಸಿದ್ದಿ, ಕೆ.ಶಿವಕುಮಾರ್, ರಮೇಶ್‍ಬಾಬು, ಬಲ್ಕಿಸ್ ಬಾನು, ಹೇಮಲತಾ ನಾಯಕ್ ಸೇರಿದಂತೆ ಹಲವರು ಮಾತನಾಡಿದರು.

ಸದಸ್ಯರ ಸುದೀರ್ಘ ಚರ್ಚೆಯ ಬಳಿಕ ಉದ್ಯೋಗ, ಶಿಕ್ಷಣ ಹಾಗೂ ಇನ್ನಿತರ ವಿಚಾರಗಳಲ್ಲಿ ಪರಿಶಿಷ್ಟ ಜಾತಿಯವರಿಗೆ ಮೀಸಲಿರುವ ಶೇ.17ರಷ್ಟು ಮೀಸಲಾತಿಯಲ್ಲಿ ‘6-6-5’ ಫಾರ್ಮೂಲಾ ಅಡಿ ಒಳ ಮೀಸಲಾತಿ ಜಾರಿ ಮಾಡುವ ಕುರಿತ ಮಹತ್ವದ ಕರ್ನಾಟಕ ಅನುಸೂಚಿತ ಜಾತಿಗಳ ಉಪ ವರ್ಗೀಕರಣ ವಿಧೇಯಕ-2025ನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.

ವಿಧೇಯಕದಲ್ಲೇನಿದೆ..?: ಈ ವಿಧೇಯಕದಂತೆ ಪರಿಶಿಷ್ಟ ಜಾತಿಗೆ ಲಭ್ಯ ಇರುವ ಶೇ.17ರಷ್ಟು ಮೀಸಲಾತಿಯಲ್ಲಿ ಪ್ರವರ್ಗ-ಎ(16 ಜಾತಿಗಳು) ಶೇ.6, ಪ್ರವರ್ಗ-ಬಿ(19 ಜಾತಿಗಳು) ಶೇ.6, ಪ್ರವರ್ಗ-ಸಿ(63 ಜಾತಿಗಳು) ಶೇ.5ನಂತೆ ಒಟ್ಟು 98 ಜಾತಿಗಳಿಗೆ ಒಳ ಮೀಸಲು ಹಂಚಿಕೆಯಾಗಲಿದೆ.

ಶಿಕ್ಷಣ ಮತ್ತು ಉದ್ಯೋಗದಲ್ಲಿ ಏಕೀಕೃತ ಮತ್ತು ಏಕರೂಪದ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ರಾಜ್ಯದ ಎಸ್‍ಸಿ ಉಪ-ವರ್ಗೀಕರಣಕ್ಕಾಗಿ ಕಾನೂನು ಮಾನ್ಯತೆ ಕಲ್ಪಿಸುವ ಮಸೂದೆ ಇದಾಗಿದೆ. ಈ ಮಸೂದೆ ಮೂಲಕ ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಕಲ್ಪಿಸುವ ಸರಕಾರಿ ಆದೇಶಗಳು ಮತ್ತು ಸುತ್ತೋಲೆಗಳಿಗೆ ಕಾನೂನಾತ್ಮಕ ರಕ್ಷಣೆ ಸಿಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News