ʼಹೈಕಮಾಂಡ್ ನನ್ನ ಪರವಾಗಿದೆ, ಮುಂದೆಯೂ ನಾನೇ ಮುಖ್ಯಮಂತ್ರಿʼ : ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಹೇಳಿಕೆ
ಸಿದ್ದರಾಮಯ್ಯ
ಬೆಳಗಾವಿ : ‘ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಆದರೂ, ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನನ್ನ ಪರವಾಗಿಯೇ ಇದೆ. ಮುಂದೆಯೂ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡುವ ಮೂಲಕ ರಾಜ್ಯದಲ್ಲಿ ‘ಸಿಎಂ ಬದಲಾವಣೆಯ ಬಗೆಗಿನ ಚರ್ಚೆಗೆ ವಿಧಾನಸಭೆಯ ಕಲಾಪದಲ್ಲೇ ತೆರೆ ಎಳೆದರು.
ಶುಕ್ರವಾರ ವಿಧಾನಸಭೆಯ ಕಲಾಪದಲ್ಲಿ ಉತ್ತರ ಕರ್ನಾಟಕ ಚರ್ಚೆಯ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ವಿಚಾರ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಯಿತು. ಆರಂಭದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಇತರೆ ಸದಸ್ಯರು ‘ಐದು ವರ್ಷ ನೀವೇ ಸಿಎಂ ಎಂದು ಘೋಷಣೆ ಮಾಡಿ’ ಎಂದು ಸವಾಲು ಹಾಕಿದರು. ಆಗ ಸಿಎಂ ಸಿದ್ದರಾಮಯ್ಯ ಅವರು, ‘ಹೈಕಮಾಂಡ್ ನನ್ನ ಪರವಾಗಿದೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದರ ಪ್ರಕಾರ ನಡೆದುಕೊಳ್ಳುವವರು ನಾವು’ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರ ನಿಮ್ಮ ಅಪ್ಪನ ಅಣೆಗೂ ಬರುವುದಿಲ್ಲ. ಮುಂದೆಯೂ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್.ಅಶೋಕ್, ‘ಬಿ.ಎಸ್.ಯಡಿಯೂರಪ್ಪ ಅವರಿಗೆ ಯಾವತ್ತೂ ನೀವು ಸಿಎಂ ಆಗಲ್ಲ ಎಂದು ಹೇಳುತ್ತಿದ್ದೀರಿ, ಆದರೆ ನಾಲ್ಕು ಬಾರಿ ಸಿಎಂ ಆದರು’ ಎಂದು ಕೆಣಕಿದರು.
ಬಳಿಕ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅದಕ್ಕೆ ಯಡಿಯೂರಪ್ಪ ಅವರನ್ನು ಐದು ವರ್ಷ ಪೂರ್ಣಗೊಳಿಸಲು ಬಿಡಲೇ ಇಲ್ಲ ನೀವು. 2008 ರಿಂದ ಮೂರು ಮಂದಿ ಸಿಎಂ ಆದರು’ ಎಂದು ಉತ್ತರಿಸಿದರು. ಮತ್ತೆ ಆರ್.ಅಶೋಕ್, ಕಳೆದ ಬಾರಿ ಐದು ವರ್ಷ ಸಿಎಂ ಸ್ಥಾನ ಕೊಟ್ಟಿದ್ದರು. ಈ ಬಾರಿ ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಬರೆಯುವಾಗ ಎರಡುವರೆ ವರ್ಷ ಎಂದು ಬರೆದು ಕೊಟ್ಟಿದ್ದಾರೆ, ಒಮ್ಮೆ ಪರಿಶೀಲನೆ ನಡೆಸಿ ಎಂದು ಸಿದ್ದರಾಮಯ್ಯ ಅವರ ಕಾಲೆಳೆದರು.
‘ನೀವು ಇಂತಹ ಮಾತುಕತೆಯಲ್ಲಿ ಇದ್ದಂತೆ ಹೇಳಬೇಡಿ. ನಾವು ಸರಿಯಾಗಿದ್ದೇವೆ. ನಮ್ಮದು ಹೈಕಮಾಂಡ್ ಪಕ್ಷ, ನಾನು ಐದು ವರ್ಷ ಪೂರ್ಣಗೊಳಿಸಿದ್ದೇನೆ. ಮತ್ತೆ ಎರಡನೇ ಬಾರಿ ಸಿಎಂ ಆಗಿದ್ದೇನೆ.ಅದು ಅಲ್ಲದೆ, ಹೈಕಮಾಂಡ್ ನನ್ನ ಪರವಾಗಿದ್ದಾರೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತಾರೆ ಅದರ ಪ್ರಕಾರ ನಡೆದುಕೊಳ್ಳುವವರು ನಾವು’ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದರು.
‘ಮೊದಲು ಜನರು ಆಶೀರ್ವಾದ ಮಾಡಬೇಕು. ನಂತರದಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಆಯ್ಕೆ ಮಾಡಬೇಕು ಹಾಗೂ ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದು ಹೇಳಿದ್ದೇನೆ. ಈಗಲೂ ನಾನೇ ಸಿಎಂ, ಹೈಕಮಾಂಡ್ ತೀರ್ಮಾನ ಮಾಡುವವರೆಗೆ ನಾನೇ ಸಿಎಂ. ಎರಡುವರೆ ವರ್ಷ ಎಂದು ಹೇಳಿಲ್ಲ. ಎರಡುವರೆ ವರ್ಷ ಸಿಎಂ ಎಂದು ತೀರ್ಮಾನ ಆಗಿಲ್ಲ. ಈಗ ನಾನೇ ಸಿಎಂ, ಮುಂದೆಯೂ ನಾನೇ ಇರುತ್ತೇನೆ’ ಎಂದು ಏರಿದ ಧ್ವನಿಯಲ್ಲಿ ಸಿದ್ದರಾಮಯ್ಯ ಸದನಕ್ಕೆ ತಿಳಿಸಿದರು.
ತೋಳು ತಟ್ಟಿ ಹೇಳಿ: ‘ಇದೇ ಜಾಗದಲ್ಲಿ ನಿಮ್ಮನ್ನು ಏನಾದರೂ ಕೆರಳಿಸಿದರೆ ತೋಳು ತಟ್ಟಿ ‘ನಾನೇ ಎಂದು ಹೇಳುತ್ತಿದ್ದೀರಿ’. ಇದೀಗ ಒಮ್ಮೆ ನೀವು ತೋಳು ತಟ್ಟಿ ನಾನೇ ಐದು ವರ್ಷ ಮುಖ್ಯಮಂತ್ರಿ ಎಂದು ಹೇಳಿ. ಒಮ್ಮೆ ನೋಡಬೇಕು ಎಂದು ಬಿಜೆಪಿ ಸದಸ್ಯ ಮುನಿರತ್ನ, ಮುಖ್ಯಮಂತ್ರಿ ಸಿದ್ದರಾಮಯ್ಯವರನ್ನು ಕೆರಳಿಸಿದರು.
‘ಸಿಎಂಗೆ ದೈಹಿಕ ನಿಶಕ್ತಿ ಬದಲಾಗಿ ರಾಜಕೀಯ ನಿಶಕ್ತಿ ಇದೆ’: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೈಹಿಕ ನಿಶಕ್ತಿ ಅಲ್ಲ, ರಾಜಕೀಯ ನಿಶಕ್ತಿ ಇದೆ ಎಂದು ಇದೇ ಚರ್ಚೆ ವೇಳೆ ವಿಪಕ್ಷದ ಸದಸ್ಯರು ಕಾಲೆಳೆದ ಪ್ರಸಂಗ ನಡೆಯಿತು.
ಸಿದ್ದರಾಮಯ್ಯ ಅವರು, ಉತ್ತರ ಕರ್ನಾಟಕ ಚರ್ಚೆಗೆ ಗುರುವಾರ ಉತ್ತರ ಕೊಡಬೇಕಿತ್ತು. ಆದರೆ ಸ್ವಲ್ಪ ದೈಹಿಕ ನಿಶಕ್ತಿ ಇತ್ತು ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ವಿಪಕ್ಷ ನಾಯಕ ಆರ್.ಅಶೋಕ್, ‘ಈಗ ಶಕ್ತಿ ಬಂದಿದೆಯೇ? ನಿಮಗೆ ರಾಜಕೀಯವಾಗಿ ಶಕ್ತಿ ಬಂದಿದೆ. ನಿಶ್ಯಕ್ತಿ ಹೋಗಿದೆ. ನಾಲ್ಕು ದಿನ ಶಕ್ತಿ ಕಡಿಮೆ ಇತ್ತು, ಆದರೆ ಈಗ ಶಕ್ತಿ ಬಂದಿದೆ’ ಎಂದು ವ್ಯಂಗ್ಯವಾಡಿದರು.
ಇದಕ್ಕೆ ಸಿದ್ದರಾಮಯ್ಯ ಉತ್ತರಿಸಿ, ‘ರಾಜಕೀಯ ನಿಶ್ಯಕ್ತಿ ಬರಲು ಸಾಧ್ಯ ಇಲ್ಲ. ಅಂತಹ ಸಂದರ್ಭ ಬರುವುದಿಲ್ಲ. ಶಾರೀರಿಕವಾದ ನಿಶ್ಯಕ್ತಿ ಬರುತ್ತದೆ ಎಂದು ಪ್ರತಿಕ್ರಿಯೆ ನೀಡಿದರು. ಈ ವೇಳೆ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ‘ನೀವು ಅಭಿನಂದನೆ ಸಲ್ಲಿಸುತ್ತಿರುವುದನ್ನು ನೋಡಿದರೆ ಐದು ವರ್ಷ ಇರಲ್ಲ. ವಿದಾಯ ಭಾಷಣ ಮಾಡುತ್ತಿದ್ದೀರಿ’ ಎಂದು ಕಾಲೆಳೆದರು. ಅದಕ್ಕೆ ಯತ್ನಾಳ್ ನಿಮ್ಮನ್ನು ಬಿಜೆಪಿಯಿಂದ ಹೊರ ಹಾಕಲಾಗಿದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.