ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿದರೆ ತಪ್ಪೇನಿದೆ: ಡಿಸಿಎಂ ಡಿ.ಕೆ.ಶಿವಕುಮಾರ್
"ವಿಜಯೇಂದ್ರ ಅವರಿಗೆ ಕಾಲವೇ ಉತ್ತರ ನೀಡುತ್ತದೆ"
ಡಿ.ಕೆ.ಶಿವಕುಮಾರ್
ಬೆಳಗಾವಿ, ಡಿ.19: “ಒಟ್ಟಿಗೆ ಸೇರಿ ಊಟ ಮಾಡುವುದನ್ನು ಬೇಡ ಎಂದು ಹೇಳಲು ಆಗುತ್ತದೆಯೇ? ನಾವು ಹೊರಗಡೆಯಿಂದ ಬಂದಿದ್ದೇವೆ. ಎಲ್ಲರೂ ಸೇರಿ ಊಟ ಮಾಡುವುದರಲ್ಲಿ ತಪ್ಪೇನಿದೆ?” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮರುಪ್ರಶ್ನಿಸಿದರು.
ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಗುರುವಾರ ರಾತ್ರಿ ಡಿನ್ನರ್ ಮೀಟಿಂಗ್ ನಡೆದಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಎಲ್ಲರೂ ಸೇರಿ ಊಟ ಮಾಡುವುದರಲ್ಲಿ ತಪ್ಪು ಹುಡುಕಬೇಡಿ” ಎಂದು ಹೇಳಿದರು.
ಅಲ್ಲಿ ಕೇವಲ ನಾಲ್ಕೈದು ಮಂದಿ ಮಾತ್ರ ಭಾಗವಹಿಸಿದ್ದಾರೆಯೇ ಎಂಬ ಮಾಧ್ಯಮದ ಪ್ರಶ್ನೆಗೆ, “ಅದು ನನಗೇಕೆ ಬೇಕು? ಈ ಪ್ರಶ್ನೆಯನ್ನು ನನ್ನಲ್ಲಿ ಏಕೆ ಕೇಳುತ್ತಿದ್ದೀರಿ?” ಎಂದು ಶಿವಕುಮಾರ್ ಅವರು ಮರುಪ್ರಶ್ನೆ ಮಾಡಿದರು.
ವಿಜಯೇಂದ್ರ ಅವರಿಗೆ ಕಾಲವೇ ಉತ್ತರ ನೀಡುತ್ತದೆ :
ತಮ್ಮನ್ನು ‘ಭ್ರಷ್ಟಾಚಾರದ ಪಿತಾಮಹ’ ಎಂದು ವಿಜಯೇಂದ್ರ ಕರೆದುಕೊಂಡಿರುವ ಕುರಿತು ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, “ವಿಜಯೇಂದ್ರ ಅವರಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡಲಾಗುತ್ತದೆ. ಕಾಲವೇ ಅದಕ್ಕೆ ಉತ್ತರ ನೀಡುತ್ತದೆ” ಎಂದು ಹೇಳಿದರು.
“ಹೈಕಮಾಂಡ್‌ಗೆ ನಾವು ಎಟಿಎಂ ಎಂದು ವಿಜಯೇಂದ್ರ ಹೇಳಿದ್ದಾರೆ. ಅದನ್ನು ಅವರು ಸಾಬೀತುಪಡಿಸಬೇಕು. ಯಾವ ಲೆಕ್ಕಾಚಾರದ ಮೇಲೆ ಈ ಆರೋಪ ಮಾಡಿದ್ದಾರೆ? ಇಲ್ಲಿ ಸರ್ಕಾರವನ್ನು ದಿವಾಳಿ ಮಾಡಿ ಹಣ ತೆಗೆದುಕೊಂಡು ಹೋಗಿ ಹೈಕಮಾಂಡ್‌ಗೆ ನೀಡುತ್ತಿದ್ದೇವೆ ಎನ್ನುವುದು ಸರಿಯೇ? ನಾವು ಎಟಿಎಂ ಎಂದು ಹೇಳಿದ್ದಾರೆ. ಈಗ ಹೇಳಬೇಕಿದ್ದುದನ್ನು ಹೇಳಿದ್ದೇನೆ. ಉಳಿದ ಉತ್ತರಕ್ಕೆ ಸಮಯ ಬರುತ್ತದೆ. ಕಾಲವೇ ಉತ್ತರ ನೀಡುತ್ತದೆ. ಅವರಿಗೆ ಬೇಕಾದ ಉತ್ತರ ಈಗಾಗಲೇ ನೀಡಿದ್ದೇನೆ” ಎಂದು ಶಿವಕುಮಾರ್ ಹೇಳಿದರು.
ರಾಜೇಂದ್ರ ಪ್ರಸಾದ್ ಆರೋಗ್ಯವಾಗಿದ್ದಾರೆ :
ತಮ್ಮ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಅವರ ಕಾರು ಅಪಘಾತ ಕುರಿತು ಪ್ರತಿಕ್ರಿಯಿಸಿದ ಅವರು, “ವೈದ್ಯರು ಸಂಪೂರ್ಣ ತಪಾಸಣೆ ನಡೆಸಿದ್ದಾರೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಕತ್ತಿನ ಭಾಗದಲ್ಲಿ ಸ್ವಲ್ಪ ನೋವಿದ್ದು, ಒಂದೆರಡು ದಿನ ವಿಶ್ರಾಂತಿ ಅಗತ್ಯವಿದೆ ಎಂದು ತಿಳಿಸಿದ್ದಾರೆ. ತೀವ್ರ ಸ್ವರೂಪದ ಗಾಯಗಳಿಲ್ಲ. ದೇವಿ ಯಲ್ಲಮ್ಮನೇ ಕಾಪಾಡಿದ್ದಾಳೆ” ಎಂದು ತಿಳಿಸಿದರು.
ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿರುವ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, “ಒಬ್ಬ ಯುವಕ ಸಾವನ್ನಪ್ಪಿರುವುದು ನೋವಿನ ಸಂಗತಿ. ಆತನ ಕುಟುಂಬದವರನ್ನು ಭೇಟಿ ಮಾಡಲು ಸಂಬಂಧಿಸಿದ ಮಂತ್ರಿಗಳಿಗೆ ಸೂಚನೆ ನೀಡುತ್ತೇನೆ. ನನಗೂ ಈ ಬಗ್ಗೆ ತುಂಬಾ ನೋವಾಗಿದೆ. ಮೃತನು ಇನ್ನೂ ಯುವಕ. ವಾಹನ ಚಾಲಕನಿಗೂ ಎದೆ ಭಾಗದಲ್ಲಿ ನೋವಾಗಿದೆ. ದೇವಸ್ಥಾನಕ್ಕೆ ತೆರಳಿ ಹಿಂದಿರುಗುವ ವೇಳೆ ವಾಹನ ಅಡ್ಡ ಬಂದ ಕಾರಣ ಈ ದುರ್ಘಟನೆ ಸಂಭವಿಸಿದೆ. ಮೃತನ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು” ಎಂದು ಹೇಳಿದರು.