ಬೆಳಗಾವಿ | ಕಬ್ಬಿಗೆ ಸೂಕ್ತ ದರ ನಿಗದಿಗೆ ಆಗ್ರಹಿಸಿ ಬೀದಿಗಿಳಿದ ಬೆಳೆಗಾರರು; ಹೆದ್ದಾರಿಯಲ್ಲೇ ಅಹೋರಾತ್ರಿ ಧರಣಿ
ಬೆಳಗಾವಿ : ಕಬ್ಬಿಗೆ ಸೂಕ್ತ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಯುವ ಸಾವಿರಾರು ರೈತರು ಬೆಳಗಾವಿ ಜಿಲ್ಲೆಯ ವಿವಿಧೆಡೆಗಳಲ್ಲಿ ಬೀದಿಗಿಳಿದಿದ್ದು, ರಾಜ್ಯ ಸರಕಾರದ ವಿರುದ್ಧ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಮಂಗಳವಾರ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಕಬ್ಬು ಬೆಳೆಗಾರರು, ಪ್ರತಿಟನ್ ಕಬ್ಬಿಗೆ 3500 ರೂ.ದರವನ್ನು ಕೂಡಲೇ ನಿಗದಿ ಮಾಡಬೇಕು. ಜತೆಗೆ ಕಬ್ಬು ನುರಿಸುವ ಕಾರ್ಯಕ್ಕೆ ಸಕ್ಕರೆ ಕಾರ್ಖಾನೆಗಳು ಮುಂದಾಗಬೇಕು ಎಂದು ಧರಣಿ ಸತ್ಯಾಗ್ರಹನಿರತ ರೈತರು ಆಗ್ರಹಿಸಿದರು. ಈ ಹೋರಾಟಕ್ಕೆ ಪ್ರತಿಪಕ್ಷ ಬಿಜೆಪಿ ಬೆಂಬಲವನ್ನು ಪ್ರಕಟಿಸಿದೆ.
ಕೇಂದ್ರ ಸರಕಾರವು ಕಬ್ಬಿಗೆ ಎಫ್‍ಆರ್‌ಪಿ ದರ ನಿಗದಿ ಮಾಡಿದೆ. ಶೇ.10.25ರಷ್ಟು ಇಳುವರಿ ಇರುವ ಕಬ್ಬಿಗೆ ಟನ್‍ಗೆ 3,550ರೂ.ನಿಗದಿ ಮಾಡಿದೆ. ಅದರ ಆಧಾರದ ಮೇಲೆ ಸಕ್ಕರೆ ಕಾರ್ಖಾನೆಗಳು ದರ ನೀಡಬೇಕು. ಆದರೆ, ಸಕ್ಕರೆ ಕಾರ್ಖಾನೆಗಳು 2,700 ರೂ.ಗಳಿಂದ 3,200 ರೂ. ನೀಡಲು ಮುಂದಾಗಿವೆ ಎಂದು ಆಕ್ಷೇಪ ವ್ಯಕ್ತವಾಗಿದೆ.
ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ‘ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆ ಸೇರಿದಂತೆ ಈ ಭಾಗದ ಕಬ್ಬು ಬೆಳೆಗಾರರು ಹೋರಾಟ, ಮಾಡುತ್ತಿದ್ದಾರೆ. ಅವರ ನ್ಯಾಯಯುತ ಬೇಡಿಕೆಗಳನ್ನು ರಾಜ್ಯ ಸರಕಾರವು ತನ್ನ ಮುಂದಾಳತ್ವದಲ್ಲಿ ಈಡೇರಿಸಬೇಕು. ಆದರೆ, ರಾಜ್ಯ ಸರಕಾರವು ರೈತರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ’ ಎಂದು ದೂರಿದರು.
ರಾಜ್ಯದಲ್ಲಿ ಕಬ್ಬು ನುರಿಸುವುದರಿಂದ ಮೊಲಾಸೆಸ್, ಎಥೆನಾಲ್ ಮೊದಲಾದವುಗಳಿಂದ ರಾಜ್ಯ ಸರಕಾರಕ್ಕೆ ತೆರಿಗೆ ಮೂಲಕ ಸುಮಾರು 50ರಿಂದ 55 ಸಾವಿರ ಕೋಟಿ ರೂ.ಗಳಷ್ಟು ಆದಾಯ ಬರುತ್ತದೆ. ಸರಕಾರವು ಸಂಕಷ್ಟದಲ್ಲಿರುವ ರೈತರ ಸಮಸ್ಯೆ ಆಲಿಸುತ್ತಿಲ್ಲ. ಈ ಸರಕಾರಕ್ಕೆ ರೈತರು, ಕಬ್ಬು ಬೆಳೆಗಾರರ ಬಗ್ಗೆ ಎಷ್ಟು ಕಾಳಜಿ ಇದೆ ಎಂಬುದು ಇದರಿದಂಲೆ ಗೊತ್ತಾಗುತ್ತದೆ ಎಂದು ಅವರು ಟೀಕಿಸಿದರು.
ಈ ಸರಕಾರವು ತನ್ನ ಜವಾಬ್ದಾರಿ ಅರಿತು ನಡೆದುಕೊಳ್ಳಬೇಕು. ಆದರೆ, ಸರಕಾರವು ತನ್ನ ಜವಾಬ್ದಾರಿಯನ್ನು ಅರಿತು ಸ್ಪಂದಿಸಿಲ್ಲ, ವಿಪಕ್ಷವಾಗಿ ನಾವು ಹೊಣೆಯನ್ನರಿತು ಕೆಲಸ ಮಾಡುತ್ತಿದ್ದೇವೆ. ನಾಡಿಗೆ ಅನ್ನ ನೀಡುವ ರೈತರ ವಿಚಾರ ಬಂದಾಗ ಪಕ್ಷಾತೀತವಾಗಿ ನಾವು ರೈತರ ಪರವಾಗಿ ನಿಲ್ಲಬೇಕಾಗುತ್ತದೆ ಎಂದು ತಿಳಿಸಿದರು.
ರೈತರಿಗೆ ಮೀಸಲು: ನಾಳೆ(ನ.5) ನನ್ನ ಜನ್ಮದಿನ, ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು, ನನ್ನ ಹುಟ್ಟುಹಬ್ಬದ ದಿನವನ್ನು ರೈತರ ಹೋರಾಟಕ್ಕೆ ನಾನು ಮೀಸಲಿಡುತ್ತಿದ್ದೇನೆ. ಒಂದು ವೇಳೆ ಕಬ್ಬು ಬೆಳೆಯುವ ರೈತರ ಸಮಸ್ಯೆ ಬಗೆಹರಿಯದಿದ್ದರೆ ರಾಜ್ಯಾದ್ಯಂತ ರೈತರ ಹೋರಾಟದ ಕಿಡಿ ಹರಡಲಿದೆ. ಹೀಗಾಗಿ ಸರಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ವಿಜಯೇಂದ್ರ ಮನವಿ ಮಾಡಿದರು.
ಈ ಹೋರಾಟದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ದುರ್ಯೋಧನ ಐಹೊಳೆ, ಬಿಜೆಪಿಯ ಮುಖಂಡರಾದ ಪಿ.ರಾಜೀವ್, ಶರಣು ತಳ್ಳಿಕೇರಿ, ಗೀತಾ ಸುತಾರ, ಸುಭಾಷ್ ದುಂಡಪ್ಪ ಪಾಟೀಲ್, ಗುರುಲಿಂಗಪ್ಪ ಅಂಗಡಿ ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.