×
Ad

‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ : ಮೂರು ವರ್ಷದಲ್ಲಿ 12 ಪ್ರಕರಣ ದಾಖಲು : ಗೃಹ ಸಚಿವ ಜಿ.ಪರಮೇಶ್ವರ್

Update: 2025-12-18 23:34 IST

ಬೆಳಗಾವಿ : ರಾಜ್ಯದಲ್ಲಿ ಮೂರು ವರ್ಷಗಳಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ ಕುರಿತು 12 ಪ್ರಕರಣ ದಾಖಲಿಸಿಕೊಂಡು 12 ಮಂದಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಗುರುವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರಶ್ನೆಗೆ ಉತ್ತರಿಸಿದ ಸಚಿವರು, 2023ರಿಂದ 2025 ಅವಧಿಯಲ್ಲಿ 12 ಪ್ರಕರಣ ʼಪಾಕಿಸ್ತಾನ್ ಜಿಂದಾಬಾದ್ʼ ಕೂಗಿದ ಸಂಬಂಧ ಸ್ವಯಂಪ್ರೇರಿತ ದೂರು ಮತ್ತು ದೂರಿನ ಆಧಾರದಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ 12 ಪ್ರಕರಣಗಳಲ್ಲಿ 5 ಪ್ರಕರಣ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದೆ. 2 ಪ್ರಕರಣ ಬಿ-ರಿಪೋರ್ಟ್ ವರದಿ ಸಲ್ಲಿಸಲಾಗಿದೆ. 3 ಪ್ರಕರಣದ ತನಿಖೆ ನಡೆಯುತ್ತಿದೆ. 1 ಪ್ರಕರಣ ಸಿ-ರಿಪೋರ್ಟ್ ಹಾಕಲಾಗಿದೆ. 1 ಪ್ರಕರಣ ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್)ದಿಂದ ವರದಿ ಬರಬೇಕಿದೆ ಎಂದು ವಿವರಿಸಿದರು.

ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಸುವಾಗ, ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಂದರ್ಭ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯನ್ನುಂಟು ಮಾಡಿದ ಸಂದರ್ಭ, ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದಲ್ಲಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲಿ, ವಾರಸುದಾರರು ಯಾರೂ ಇಲ್ಲದೇ ಇರುವ ಪ್ರಕರಣಗಳಲ್ಲಿ, ದ್ವೇಷಭಾಷಣ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗುವ ಸಂದರ್ಭಗಳಲ್ಲಿ, ಕೆಲವು ಪ್ರಕರಣಗಳಲ್ಲಿ ಸಾರ್ವಜನಿಕರು ದೂರು ನೀಡಲು ಬಾರದೇ ಇದ್ದ ಸಂದರ್ಭಗಳಲ್ಲಿ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುವುದು ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.

ಸಾರ್ವಜನಿಕರ ಪ್ರಾಣ ಮತ್ತು ಮಾನ ಕಾಪಾಡುವ ಸಂದರ್ಭಗಳಲ್ಲಿ ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಲಾಗುತ್ತಿದೆ. ಸ್ಥಳೀಯ ಮತ್ತು ವಿಶೇಷ ಕಾಯ್ದೆ ಅಡಿಯಲ್ಲಿ ಕಾನೂನು ಬಾಹೀರ ಚಟುವಟಿಕೆಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತಹ ಸಂಜ್ಞೆಯ ಅಪರಾಧ, ಕೃತ್ಯದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದೂರುಗಳನ್ನು ದಾಖಲಿಸಲಾಗುತ್ತಿದೆ ಎಂದರು.

ಎರಡೂವರೆ ವರ್ಷದಲ್ಲಿ 61,299 ಸ್ವಯಂಪ್ರೇರಿತ ದೂರು: ರಾಜ್ಯದಲ್ಲಿ ಹಿಂದಿನ ಎರಡೂವರೆ ವರ್ಷದಲ್ಲಿ ಒಟ್ಟು 61,299 ಸ್ವಯಂಪ್ರೇರಿತ(ಸುವೋಮೋಟೋ) ದೂರುಗಳನ್ನು ದಾಖಲು ಮಾಡಲಾಗಿದೆ. 2023ರಲ್ಲಿ 20,435 ಪ್ರಕರಣ, 2024ರಲ್ಲಿ 19,152 ಹಾಗೂ 2025ರಲ್ಲಿ 21,712 ಪ್ರಕರಣಗಳನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಲಾಗಿದೆ. ದಾಖಲು ಮಾಡಿರುವ ಈ ಸ್ವಯಂಪ್ರೇರಿತ ದೂರುಗಳಲ್ಲಿ 57,646 ದೂರುಗಳಿಗೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಯಾವುದೇ ದೂರುಗಳನ್ನು ಹಿಂಪಡೆದಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News