ಆಡಳಿತಾರೂಢ ಕಾಂಗ್ರೆಸ್ ಪಕ್ಷದಿಂದ ವಿಪಕ್ಷಗಳ ಧ್ವನಿ ಅಡಗಿಸುವ ಕೆಲಸ : ಬಿ.ವೈ.ವಿಜಯೇಂದ್ರ
ಬೆಳಗಾವಿ : ಆಡಳಿತಾರೂಢ ಕಾಂಗ್ರೆಸ್ ಪಕ್ಷವು ದ್ವೇಷ ಭಾಷಣ ನಿಯಂತ್ರಣ ಮಸೂದೆ ಮೂಲಕ ವಿಪಕ್ಷಗಳ ಧ್ವನಿ ಅಡಗಿಸುವ ಕೆಲಸಕ್ಕೆ ಮುಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಗುರುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಮಸೂದೆ ಮೂಲಕ ಮಾಧ್ಯಮದವರ ಧ್ವನಿಯನ್ನೂ ನಿಯಂತ್ರಿಸುವ ಕೆಲಸ ಮಾಡಲು ಹೊರಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಯಾರಾದರೂ ತಮ್ಮ ಅಭಿಪ್ರಾಯ ತಿಳಿಸಿದರೆ, ಅದನ್ನು ಹತ್ತಿಕ್ಕಿ, 7-8 ವರ್ಷ ಜೈಲಿಗೆ ಹಾಕುವ ದುಸ್ಸಾಹಸಕ್ಕೆ ಹೊರಟಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಇದನ್ನು ವಿರೋಧಿಸಲಿದ್ದೇವೆ ಎಂದು ತಿಳಿಸಿದರು.
ಸ್ಪೀಕರ್ ಖಾದರ್ ಅವರು ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತಿದ್ದಾರೆ. ಸಚಿವ ಬೈರತಿ ಸುರೇಶ್ ಕರಾವಳಿ ಭಾಗದ ಮತದಾರರಿಗೆ ಅಪಮಾನ ಮಾಡಿದ್ದಾರೆ, ಸದನದಲ್ಲಿ ಈ ವಿಧೇಯಕ ಕುರಿತು ಚರ್ಚೆಗೆ ಒತ್ತಾಯಿಸಲಾಗುವುದು. 1975ರ ತುರ್ತು ಪರಿಸ್ಥಿತಿಯನ್ನು ನೆನಪಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡಲು ಹೊರಟಿದೆ ಎಂದು ಅವರ ಆಕ್ಷೇಪಿಸಿದರು.
ಬೆದರಿಕೆ ಹಾಕಲು ಬರಬೇಡಿ: ಮಂಡ್ಯ ಜಿಲ್ಲೆಯ ಸ್ವಾತಂತ್ರ್ಯ ಯೋಧರಿಗೆ 8 ತಿಂಗಳಿಂದ ಈ ಕಾಂಗ್ರೆಸ್ ಸರಕಾರ ಗೌರವಧನ ಕೊಟ್ಟಿಲ್ಲ. ಕಾರಣ ಏನು? ಖಜಾನೆ ಖಾಲಿಯೇ ಅಲ್ಲವೇ? ಯಾವನಿಗೋ ದಬ್ಬಾಳಿಕೆ, ಬೆದರಿಕೆ ಹಾಕಿದಂತೆ ನನಗೆ ಬೆದರಿಕೆ ಹಾಕಲು ಬರಬೇಡಿ. ನಾನೊಬ್ಬ ಜನಪ್ರತಿನಿಧಿ, ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷ ಎಂದು ವಿಜಯೇಂದ್ರ ಗಮನಕ್ಕೆ ತಂದರು.
ಯಡಿಯೂರಪ್ಪ ವಿರುದ್ಧ ಷಡ್ಯಂತ್ರದ ಕುರಿತು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಡಿ.ಕೆ.ಶಿವಕುಮಾರ್ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ವಿಪಕ್ಷದ ಪ್ರಶ್ನೆಗೆ ಉತ್ತರ ಕೊಡುವ ತಾಕತ್ತಿದ್ದರೆ ಸದನದಲ್ಲಿ ಬಂದು ಮಾತನಾಡಲಿ. ನನ್ನ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದರು.