×
Ad

ಬೆಳಗಾವಿ: ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರ ಸ್ಥಾನ ರದ್ದುಗೊಳಿಸಲು ಕರವೇ ಆಗ್ರಹ; ರಾಜ್ಯಪಾಲರಿಗೆ ದೂರು

Update: 2025-09-24 14:14 IST

ಖಾನಾಪುರ: ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದ ಶಾಸಕ ವಿಠ್ಠಲ ಹಲಗೇಕರ ಅವರ ಶಾಸಕರ ಸ್ಥಾನವನ್ನು ರದ್ದುಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ದೂರು ಸಲ್ಲಿಸಿದರು.

ತಹಶೀಲ್ದಾರ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕರವೇ ತಾಲ್ಲೂಕು ಅಧ್ಯಕ್ಷ ವಿಠ್ಠಲ ಹಿಂಡಲಕರ, “ಪ್ರತಿಭಟನೆ ಜನರ ಪ್ರಜಾಪ್ರಭುತ್ವ ಹಕ್ಕು. ಆದರೆ ಶಾಸಕರು ಹೋರಾಟಗಾರರ ಬಗ್ಗೆ ದಮ್ಮು-ತಾಕತ್ತಿನ ಭಾಷೆ ಬಳಸಿ, ‘ಮನೆಗೆ ಮುತ್ತಿಗೆ ಹಾಕಿ’ ಎಂದು ಹೇಳುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಆದ್ದರಿಂದ ಇಂತಹ ಶಾಸಕರನ್ನು ಕೂಡಲೇ ಸ್ಥಾನದಿಂದ ವಜಾ ಮಾಡಬೇಕು” ಎಂದು ಆಗ್ರಹಿಸಿದರು.

ಅವರು ಮುಂದುವರಿಸಿ, “ತಾಲೂಕು ಬಡವಾಗಿದೆ. ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಲು ಎಲ್ಲರಿಗೂ ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳನ್ನು ಪುನಃ ಆರಂಭಿಸುವ ಬೇಡಿಕೆಗೆ ಶಾಸಕರು ಸ್ಪಂದಿಸಿಲ್ಲ. ಹೋರಾಟಗಾರರನ್ನು ಅವಹೇಳನ ಮಾಡಿರುವುದು ಖಂಡನೀಯ. ನಾಲ್ಕು ದಿನಗಳಲ್ಲಿ ಶಾಸಕರು ಕ್ಷಮೆ ಕೇಳದಿದ್ದರೆ ಮುತ್ತಿಗೆ ಹಾಕಿ ನಮ್ಮ ಶಕ್ತಿ ತೋರಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಶರಥ ಬನೋಶಿ ಸಹ ಹೋರಾಟಗಾರರ ಪರ ನಿಂತು, “ಶಾಸಕರು ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಹೋರಾಟಕ್ಕೆ ಸಹ ಬರದೇ, ಹೋರಾಟಗಾರರನ್ನೇ ಹಗುರವಾಗಿ ತೆಗೆದುಕೊಳ್ಳುತ್ತಿದ್ದಾರೆ. ದಮ್ಮು ಇದ್ದರೆ ರಸ್ತೆಗಳ ದುರಸ್ತಿ ಮಾಡಿ, ನೂರು ವರ್ಷಗಳ ಇತಿಹಾಸವಿರುವ ಮಾದರಿ ಶಾಲೆ ಸುಧಾರಿಸಿ. ಇಲ್ಲದಿದ್ದರೆ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗಲಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ತಾಲೂಕಾ ಉಪಾಧ್ಯಕ್ಷ ಜಯವಂತ ನಿಡಲಕರ, ಭರತೇಶ ಜೋಳದ, ಉದಯ ತೇಗೂರು, ನಾರಾಯಣ ಸಾವಂತ, ತಮ್ಮಣ್ಣ ಗವನಾಳಿ, ರವಿ ಮಾದಾರ, ರಾಮಚಂದ್ರ ಪಾಟೀಲ ಹಾಗೂ ಇಟಗಿ ಗ್ರಾಮದ ಹಲವಾರು ಹೋರಾಟಗಾರರು ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News