ಬೆಳಗಾವಿ | ತಾಂತ್ರಿಕ ವೈಫಲ್ಯದಿಂದ ಮರಕ್ಕೆ ಢಿಕ್ಕಿಯಾದ ಸರಕಾರಿ ಬಸ್: 10ಕ್ಕೂ ಅಧಿಕ ಮಂದಿಗೆ ಗಾಯ
Update: 2025-08-08 10:46 IST
ಬೆಳಗಾವಿ: ಸರಕಾರಿ ಬಸ್ಸೊಂದು ತಾಂತ್ರಿಕ ವೈಫಲ್ಯ ಕಾರಣ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ 10ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡ ಘಟನೆ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
ಬಸ್ ಬೆಳಗಾವಿಯಿಂದ ಬೆಳಗುಂದಿಗೆ ಹೋಗುವ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ.
ಚಲಿಸುತ್ತಿದ್ದ ಬಸ್ಸಿನ ಸ್ಟೇರಿಂಗ್ ರಾಡ್ ಹಠಾತ್ ತುಂಡಾಯಿತೆನ್ನಲಾಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಚರಂಡಿಗಿಳಿದು ಮರವೊಂದಕ್ಕೆ ಢಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ 30ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯರು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.