×
Ad

ಬಿಜೆಪಿ ನಾಯಕರಿಂದ ಸ್ತ್ರೀ ಕುಲಕ್ಕೆ ಅವಮಾನ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Update: 2024-04-14 18:38 IST

ಬೆಳಗಾವಿ: ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಮಾತನಾಡುವಾಗ ಬಿಜೆಪಿ ನಾಯಕರ ನಾಲಿಗೆ ಬಿಗಿ ಹಿಡಿತದಲ್ಲಿರಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಸಿದ್ದಾರೆ.

ರವಿವಾರ ನಗರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಜಯಂತಿ ನಿಮಿತ್ತ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ‘ಬಿಜೆಪಿಯ ಮಾಜಿ ಶಾಸಕ ಸಂಜಯ್ ಪಾಟೀಲ್ ನನ್ನ ವಿರುದ್ಧ ನೀಡಿರುವ ಹೇಳಿಕೆ ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ. ಸಂಜಯ್ ನನ್ನ ವಿರುದ್ಧ ಮಾತನಾಡುವಾಗ ವೇದಿಕೆಯಲ್ಲಿದ್ದ ಹಿರಿಯ ನಾಯಕರು ಅದನ್ನು ತಡೆಯಬಹುದಿತ್ತು. ಇದು ನನಗೆ ಮಾಡಿದ ಅಪಮಾನ ಅಲ್ಲ, ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದರು.

ಇದು ಇಡೀ ಸಮಾಜಕ್ಕೆ ಮಾಡಿದ ಅವಮಾನ. ಇದರಿಂದ ಮಹಿಳೆಯರ ಆತ್ಮಗೌರವಕ್ಕೆ ಧಕ್ಕೆಯಾಗಿದೆ. ಅವರ ವಿರುದ್ಧ ಇಡೀ ರಾಜ್ಯದ ಮಹಿಳೆಯರು ಧಿಕ್ಕರಿಸಲು ಕರೆ ಕೊಡುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಇಡೀ ಸಮಾಜ ನನ್ನ ಜೊತೆಗೆ ಇದೆ. ಇಡೀ ಕಾಂಗ್ರೆಸ್ ಪಕ್ಷದ ನಾಯಕರು ನನ್ನ ಜೊತೆಗೆ ಇದ್ದಾರೆ ಎಂದು ಅವರು ಹೇಳಿದರು.

ಮಹಿಳಾ ಸಬಲೀಕರಣದ ವಿರೋಧಿಗಳು: ಬಿಜೆಪಿಗರು ಮಹಿಳಾ ಅಭಿವೃದ್ಧಿ, ಸಬಲೀಕರಣದ ವಿರೋಧಿಗಳು. ಇದಕ್ಕಾಗಿಯೇ ಹೋದಲೆಲ್ಲಾ ನಮ್ಮ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಿರಿಯರು, ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ. ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಸ್ತ್ರೀ ವಿರೋಧಿಗಳು ಎಂದು ಬಿಜೆಪಿಯವರು ನಿರೂಪಿಸಿದ್ದಾರೆ ಎಂದು ಕಿಡಿಕಾರಿದರು.

‘ಕುಮಾರಸ್ವಾಮಿಯವರು ಯಾವ ಹಳ್ಳಿಯ ಮಹಿಳೆ ದಾರಿ ತಪ್ಪಿದ್ದಾರೆಂದು ಸ್ಪಷ್ಟವಾಗಿ ಹೇಳಲಿ. ಹಳ್ಳಿಯ ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಯಾವುದೇ ಸ್ವಾರ್ಥಕ್ಕಾಗಿ ಯೋಜನೆಗಳನ್ನು ಮಾಡಿಲ್ಲ. ಬಿಜೆಪಿಯ ಮನಸ್ಥಿತಿ ಬಗ್ಗೆ ಜನರಿಗೆ ಗೊತ್ತಾಗಿದೆ. ಬರೀ ಸುಳ್ಳು ಹೇಳುವುದು ಬಿಜೆಪಿಯ ಅಜೆಂಡಾ ಆಗಿದೆ’

ಲಕ್ಷ್ಮಿ ಹೆಬ್ಬಾಳ್ಕರ್, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News