×
Ad

ಎರಡು ವರ್ಷದಲ್ಲಿ ಮೂರು ಭ್ರೂಣಹತ್ಯೆ, 13 ಜನರ ಬಂಧನ : ದಿನೇಶ್ ಗುಂಡೂರಾವ್

Update: 2025-12-16 17:05 IST

ಬೆಳಗಾವಿ : ರಾಜ್ಯದಲ್ಲಿ ಎರಡು ವರ್ಷಗಳಲ್ಲಿ ಮೂರು ಭ್ರೂಣಹತ್ಯೆ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ 13 ಜನರನ್ನು ಬಂಧಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಮಂಗಳವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‍ಪಿಜಿ ಆಸ್ಪತ್ರೆಯ 6 ಜನರನ್ನು, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸರಕಾರಿ ವಸತಿ ಗೃಹದ 6 ಜನರನ್ನು ಮತ್ತು ಬೆಂಗಳೂರು ನಗರ ಜಿಲ್ಲೆಯ ದ್ಯಾನಿಷ್ ಪಾಲಿ ಕ್ಲಿನಿಕ್ ಆಸ್ಪತ್ರೆಯ ಒಬ್ಬರನ್ನು ಬಂಧಿಸಲಾಗಿದೆ. ಈ ಪ್ರಕರಣಗಳ ತನಿಖೆಯು ನ್ಯಾಯಾಲಯಗಳಲ್ಲಿ ಬಾಕಿ ಇರುತ್ತದೆ ಎಂದು ವಿವರಿಸಿದರು.

ಈ ಹಿಂದೆ ಬೆಳಕಿಗೆ ಬಂದಿದ್ದ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮವಹಿಸಲಾಗಿದ್ದು, ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ಭ್ರೂಣ ಲಿಂಗ ಪತ್ತೆಗೆ ಸಂಬಂಧಿಸಿದ ಪ್ರಕರಣದಲ್ಲಿ ಶಾಮೀಲಾಗಿರಬೇಕೆಂಬ ಹಿನ್ನೆಲೆಯಲ್ಲಿ ರೇಡಿಯಾಲಜಿಸ್ಟ್ ಡಾ.ಎಸ್.ಎಲ್.ಶಶಿ ಎಂಬುವರನ್ನು 2025ರ ಸೆಪ್ಟೆಂಬರ್ 3ರಂದು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.

ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕ ನೋಡಲ್ ಅಧಿಕಾರಿ ನೇಮಕ: ರಾಜ್ಯಾದ್ಯಂತ ಭ್ರೂಣಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲಿ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಿ ಭ್ರೂಣ ಹತ್ಯೆ ತಡೆಗೆ ಕ್ರಮಗಳನ್ನು ಬಿಗಿಗೊಳಿಸುತ್ತಿದ್ದೇವೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ, ಕೆಲವೇ ಆಸ್ಪತ್ರೆಗಳಲ್ಲಿಯೇ ಗಂಡು ಸಂತಾನವು ಗರಿಷ್ಟ ಪ್ರಮಾಣದಲ್ಲಿ ದಾಖಲಾಗುತ್ತಿರುವುದನ್ನು ಗುಪ್ತಚರ ದಾಳಿಯ ಮೂಲಕ ಕಂಡುಕೊಳ್ಳಲಾಗುತ್ತಿದೆ. ಯಾವ ತಾಲೂಕಿನಲ್ಲಿ ಗಂಡು-ಹೆಣ್ಣಿನ ಅನುಪಾತ ಹೆಚ್ಚುತ್ತಿದೆ? ಯಾವ ಆಸ್ಪತ್ರೆಯಲ್ಲಿ ಏನಾಗುತ್ತಿದೆ? ಎನ್ನುವಂತಹ ಅಂಶಗಳ ಮೇಲೆ ಮೇಲ್ವಿಚಾರಣೆ ನಡೆಸಿ, ಅಂತಹ ಜಾಲವನ್ನು ಹತ್ತಿಕ್ಕಲು ಸೂಕ್ತ ಕ್ರಮವಹಿಸಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಪಿ.ಸಿ.-ಪಿ.ಎನ್.ಡಿ.ಟಿ. ಕಾಯ್ದೆಯ ಬಗ್ಗೆ ರಾಜ್ಯ ಮಟ್ಟದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕಾಲಕಾಲಕ್ಕೆ ಅರಿವು ಮೂಡಿಸುವ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News