ವಿದ್ಯುತ್ ಕಳವು, ವಿದ್ಯುತ್ ದುರ್ಬಳಕೆಯ ವಿರುದ್ಧ ಕಠಿಣ ಕ್ರಮ : ಕೆ.ಜೆ.ಜಾರ್ಜ್
ಕೆ.ಜೆ.ಜಾರ್ಜ್
ಬೆಳಗಾವಿ : ರಾಜ್ಯದಲ್ಲಿ ವಿದ್ಯುತ್ ಕಳವು ಹಾಗೂ ವಿದ್ಯುತ್ ದುರ್ಬಳಕೆಯ ಪ್ರಕರಣಗಳನ್ನು ಪತ್ತೆಹಚ್ಚಲು ಮತ್ತು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ವಿದ್ಯುತ್ ಸರಬರಾಜು ಕಂಪೆನಿಗಳಲ್ಲಿ ಜಾಗೃತದಳ(ವಿಜಿಲೆನ್ಸ್) ಘಟಕವನ್ನು ಪೊಲೀಸ್ ಅಧೀಕ್ಷಕರು/ಪೊಲೀಸ್ ಉಪ ಅಧೀಕ್ಷಕರು ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ನೇತೃತ್ವದಲ್ಲಿ ರಚಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಮಂಗಳವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರತಿ ಜಿಲ್ಲಾಮಟ್ಟದಲ್ಲಿ ಜಾಗೃತದಳ ಪೊಲೀಸ್ ಠಾಣೆಗಳಲ್ಲಿ ಪೊಲೀಸ್ ಇನ್‍ಸ್ಪೆಕ್ಟರ್/ ಸಬ್-ಇನ್‍ಸ್ಪೆಕ್ಟರ್‍ರೊಂದಿಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಮತ್ತು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜಾಗೃತದಳವು ಸ್ಥಳೀಯ ವಿದ್ಯುತ್ ಸರಬರಾಜು ಕಂಪೆನಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಜಾಗೃತದಳವು ನಿಯಮಿತವಾಗಿ ಕಾಲ-ಕಾಲಕ್ಕೆ ತಪಾಸಣೆ/ಅನಿರೀಕ್ಷಿತ ದಾಳಿ ನಡೆಸುವ ಮೂಲಕ ವಿದ್ಯುತ್ ಕಳ್ಳತನ/ವಿದ್ಯುತ್ ದುರ್ಬಳಕೆ ಪ್ರಕರಣಗಳನ್ನು ತಡೆಗಟ್ಟಲು ಕ್ರಮ ವಹಿಸುತ್ತಿದ್ದು, ವಿದ್ಯುತ್ ಕಳ್ಳತನ ಕಂಡುಬಂದ ತಕ್ಷಣ ಸ್ಥಳೀಯ ವಿದ್ಯುತ್ ಸರಬರಾಜು ಕಂಪೆನಿಗಳ ಸಿಬ್ಬಂದಿಗಳ ಮೂಲಕ ವಿದ್ಯುತ್ ನಿಲುಗಡೆಗೊಳಿಸಿ ನಿಯಮಾನುಸಾರ ಪ್ರಕರಣವನ್ನು ದಾಖಲಿಸುತ್ತಿದೆ. ಅಲ್ಲದೆ, ಪ್ರತಿ ಪೊಲೀಸ್ ಠಾಣಾ ಮಟ್ಟದಲ್ಲಿ ವಿಶೇಷ ದಾಳಿ ದಳಗಳನ್ನು ಸಹ ರಚಿಸಿ ಸಾಮೂಹಿಕ ತಪಾಸಣೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ವಿದ್ಯುತ್ ಕಳ್ಳತನ/ದುರ್ಬಳಕೆ ಕಂಡುಬಂದರೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೆ.ಜೆ.ಜಾರ್ಜ್ ಹೇಳಿದರು.
ಭಾರತೀಯ ವಿದ್ಯುಚ್ಛಕ್ತಿ ಕಾಯ್ದೆ-2003ರ ಸೆಕ್ಷನ್ 126 ಮತ್ತು 135ರ ಅಡಿಯಲ್ಲಿ ಕ್ರಮವಾಗಿ ಅಸಂಜ್ಞೆಯ (Non Cognizable) ಹಾಗೂ ಸಂಜ್ಞೆಯ (Cognizable) ಪ್ರಕರಣಗಳನ್ನು ಜಾಗೃತದಳ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿ, ತನಿಖೆ ನಡೆಸಿ, ಕೆ.ಇ.ಆರ್.ಸಿ. ಸೂಚಿಸಿರುವ ವಿದ್ಯುತ್ ಸರಬರಾಜು ನಿಬಂಧನೆಗಳ ಪ್ರಕಾರ ದಂಡ ವಿಧಿಸಲಾಗುತ್ತಿದೆ. ಸೆಕ್ಷನ್ 135 ಅಡಿಯಲ್ಲಿ ದಾಖಲಾಗುವ ಪ್ರಕರಣಗಳನ್ನು ವಿಶೇಷ ನ್ಯಾಯಾಲಯಗಳಲ್ಲಿ ವಿಚಾರಣೆಗೊಳಪಡಿಸಲಾಗುತ್ತದೆ ಎಂದು ಕೆ.ಜೆ.ಜಾರ್ಜ್ ತಿಳಿಸಿದರು.