ಮೊಟ್ಟೆಯಿಂದ ಕ್ಯಾನ್ಸರ್ ವದಂತಿ: ಸ್ಯಾಂಪಲ್ ಪರೀಕ್ಷೆಯಲ್ಲಿ ಯಾವುದೇ ಲೋಪವಿಲ್ಲ ಎಂದ ದಿನೇಶ್ ಗುಂಡೂರಾವ್
"ಮೊಟ್ಟೆ ವಿಷಯದಲ್ಲಿ ಜನರು ಆತಂಕ ಪಡುವುದು ಬೇಡ"
PC : freepik/ದಿನೇಶ್ ಗುಂಡೂರಾವ್
ಬೆಳಗಾವಿ : ಮೊಟ್ಟೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ವೈರಲ್ ಸುದ್ದಿಗೆ ಸಂಬಂಧಪಟ್ಟಂತೆ ಮೊಟ್ಟೆಗಳ ಸ್ಯಾಂಪಲ್ ಪಡೆದು ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆಯಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ. ಆದರೂ ಇಂತಹ ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಸೂಕ್ತ. ಅನಾವಶ್ಯಕವಾಗಿ ಇಂತಹ ವಿಚಾರಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದರು.
ಮೊಟ್ಟೆಯಿಂದ ಕ್ಯಾನ್ಸರ್ ಬರುತ್ತದೆ ಎಂಬ ಆತಂಕ ವಿಷಯ ಕುರಿತು ಮಂಗಳವಾರ ವಿಧಾನ ಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ರಮೇಶ್ ಬಾಬು ಪ್ರಸ್ತಾಪಿಸಿ, ಖಾಸಗಿ ಕಂಪೆನಿಯೊಂದು ಮೊಟ್ಟೆ ಕುರಿತು ಅಪಪ್ರಚಾರ ನಡೆಸುತ್ತಿದ್ದು, ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ದಿನೇಶ್ ಗುಂಡೂರಾವ್, ಈ ಹಿಂದೆಯೇ 124 ಮಾದರಿ ಮೊಟ್ಟೆಗಳನ್ನು ಪರೀಕ್ಷೆಗೆ ಒಳಪಡಿಸಿದ್ದೆವು. ಇದರಲ್ಲಿ 123 ಮೊಟ್ಟೆ ಸರಿಯಾಗಿ ಇದೆ ಎಂದು ವರದಿ ಬಂದಿದೆ. ಈಗ ಎಗೋಸ್ ಕಂಪೆನಿಯ ಮೊಟ್ಟೆಗಳ ತಪಾಸಣೆ ಮಾಡುತ್ತಿದ್ದೇವೆ. ಆ ಕಂಪೆನಿಯ ಮೊಟ್ಟೆ ಜೊತೆಗೆ ಬೇರೆ ಬೇರೆ ಮೊಟ್ಟೆಗಳ ಸ್ಯಾಂಪಲ್ ತೆಗೆದುಕೊಂಡಿದ್ದೇವೆ. ಮೂರ್ನಾಲ್ಕು ದಿನಗಳಲ್ಲಿ ಅದರ ವರದಿ ಬರಲಿದೆ. ಮೊಟ್ಟೆ ವಿಷಯದಲ್ಲಿ ಜನರು ಆತಂಕ ಪಡುವುದು ಬೇಡ ಎಂದರು.