×
Ad

23 ಕಂಬಳೋತ್ಸವಕ್ಕೆ ತಲಾ 5 ಲಕ್ಷ ರೂ. ನೆರವು : ಸಚಿವ ಎಚ್.ಕೆ.ಪಾಟೀಲ್

Update: 2025-12-09 16:21 IST

ಎಚ್.ಕೆ.ಪಾಟೀಲ್

ಬೆಳಗಾವಿ (ಸುವರ್ಣ ವಿಧಾನಸೌಧ), ಡಿ. 9: ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಕಂಬಳ ಸಮಿತಿಯಿಂದ ಅನುಮೋದನೆಗೊಂಡ 23 ಕಂಬಳೋತ್ಸವಗಳಿಗೆ ರಾಜ್ಯ ಸರಕಾರದಿಂದ ತಲಾ 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಘೋಷಣೆ ಮಾಡಿದ್ದಾರೆ.

ಮಂಗಳವಾರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅಶೋಕ್ ಕುಮಾರ್ ರೈ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, 2025-26ನೆ ಸಾಲಿನಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯೋಜಿಸಲಾಗುವ ಕಂಬಳ ಉತ್ಸವಗಳಿಗೆ ಅನುದಾನ ಕೋರಿ ಪ್ರಸ್ತಾವನೆಗಳು ಸ್ವೀಕೃತವಾಗಿವೆ. ಇದಕ್ಕೆ ಸರಕಾರದಿಂದ ಅನುಮೋದನೆ ನೀಡಿ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆ ಕಡತ ರವಾನಿಸಲಾಗಿದೆ. 2024-25ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ, ಮಂಗಳೂರು, ನರಿಂಗಾಣ, ಮೂಡಬಿದ್ರೆ, ಐಕಳ, ಜಪ್ಪು, ಪುತ್ತೂರು, ಬಂಟ್ವಾಳ, ಉಪ್ಪಿನಂಗಡಿ ಮತ್ತು ವೇಣೂರಿನಲ್ಲಿ ಆಯೋಜಿಸಿದ್ದ ಕಂಬಳೋತ್ಸವಗಳಿಗೆ ತಲಾ 5 ಲಕ್ಷದಂತೆ ಒಟ್ಟು 50 ಲಕ್ಷಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಕರಾವಳಿ ಭಾಗದ ಸದಸ್ಯರಾದ ಸುನೀಲ್ ಕುಮಾರ್, ವೇದವಾಸ್ ಕಮಾತ್, ಅಶೋಕ್ ಕುಮಾರ್ ರೈ ಸೇರಿದಂತೆ ಪ್ರಮುಖರು, ಕರಾವಳಿ ಭಾಗದಲ್ಲಿ ಕಂಬಳೋತ್ಸವ ಮುಖ್ಯವಾದ ಕ್ರೀಡೆ ಮಾತ್ರವಲ್ಲದೆ, ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜನ ನೀಡಲಿದೆ. ಹೀಗಾಗಿ, ರಾಜ್ಯ ಸರಕಾರ ಜಿಲ್ಲಾ ಕಂಬಳ ಸಮಿತಿಯಿಂದ ಅನುಮೋದನೆಗೊಂಡ ಕಂಬಳೋತ್ಸವಗಳಿಗೆ ಪ್ರತಿ ವರ್ಷ ಬಜೆಟ್‍ನಲ್ಲಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, ಶಾಸಕರುಗಳ ಅಭಿಪ್ರಾಯದಂತೆ 23 ಕಂಬಳೋತ್ಸವಗಳಿಗೆ ಅನುದಾನ ಬಿಡುಗಡೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಆಗ ಸಚಿವರ ನಿರ್ಧಾರವನ್ನು ಸಭಾಧ್ಯಕ್ಷ ಯು.ಟಿ.ಖಾದರ್, ಸೇರಿ ಹಲವು ಶಾಸಕರುಗಳು ಒಕ್ಕೊರಲಿನಿಂದ ಅಭಿನಂದಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News