ಬೆಳಗಾವಿ | 500 ರೂ. ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ; ಇಬ್ಬರ ಬಂಧನ
ಹುಸೇನ ಗೌಸ್ ಸಾಬ್ ತಾಸೇವಾಲೆ(45)
ಬೆಳಗಾವಿ : ಕೇವಲ 500 ರೂ. ವಿಚಾರಕ್ಕೆ ಶುರುವಾದ ಗಲಾಟೆ ವ್ಯಕ್ತಿಯೋರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ತಾಲ್ಲೂಕಿನ ಯಳ್ಳೂರ ಗ್ರಾಮದಲ್ಲಿ ನಡೆದಿದೆ.
ಯಳ್ಳೂರ ಗ್ರಾಮದ ಹುಸೇನ ಗೌಸ್ ಸಾಬ್ ತಾಸೇವಾಲೆ(45) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಮಿಥುನ್ ಮತ್ತು ಮನೋಜ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹುಸೇನ್ ಮತ್ತು ಈ ಇಬ್ಬರು ಆರೋಪಿಗಳು ಗಾರೆ ಕೆಲಸ ಮಾಡುತ್ತಾರೆ. ಸ್ಕ್ರಾಪ್ ಸಾಮಾನು ಮಾರಾಟ ಮಾಡಿ ಬಂದ ಹಣದಲ್ಲಿ 500 ರೂ. ಕೊಡುವ ವಿಚಾರಕ್ಕೆ ಹುಸೇನ್ ಮನೆ ಬಳಿ ಶನಿವಾರ ರಾತ್ರಿ ಜಗಳ ಆರಂಭವಾಗುತ್ತದೆ. ಈ ವೇಳೆ ಹುಸೇನ್ ಗುಪ್ತಾಂಗಕ್ಕೆ ಆರೋಪಿಗಳು ಹೊಡೆದಿರುತ್ತಾರೆ. ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಸದ್ಯ ಇಬ್ಬರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.