×
Ad

‘ಮರಾಠಿ ಮಾತನಾಡಲು ಬರಲ್ಲ’ ಎಂದಿದ್ದಕ್ಕೆ ಕೆಎಸ್ಸಾರ್ಟಿಸಿ ಬಸ್ ನಿರ್ವಾಹನ ಮೇಲೆ ಹಲ್ಲೆ |ಓರ್ವ ಅಪ್ರಾಪ್ತ ಸೇರಿ ನಾಲ್ವರ ಬಂಧನ : ಉಳಿದವರಿಗೆ ಶೋಧ

Update: 2025-02-22 20:42 IST

ಹಲ್ಲೆಗೊಳಗಾದ ನಿರ್ವಾಹಕ

ಬೆಳಗಾವಿ: ‘ಮರಾಠಿ ಮಾತನಾಡಲು ಬರುವುದಿಲ್ಲ’ ಎಂದು ಹೇಳಿದ್ದಕ್ಕೆ ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನ ಮೇಲೆ 20ಕ್ಕೂ ಹೆಚ್ಚು ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿದ ಘಟನೆ ತಾಲ್ಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಶುಕ್ರವಾರ(ಫೆ.21) ನಡೆದಿತ್ತು.

ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ನಿರ್ವಾಹಕ ಮಹಾದೇವ ಹುಕ್ಕೇರಿ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಓರ್ವ ಅಪ್ರಾಪ್ತ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಣ್ಣ ಬಾಳೇಕುಂದ್ರಿ ಗ್ರಾಮದ ಮಾರುತಿ ತುರುಮುರಿ, ರಾಹುಲ್ ರಾಜು ನಾಯ್ಡು, ಬಾಳು ಗೋಜಗೇಕರ್ ಬಂಧಿತರು ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಮಾರಿಹಾಳ ಪೊಲೀಸರು ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಫೆ.21ರ ಶುಕ್ರವಾರದಂದು ಬೆಳಗಾವಿ-ಸುಳೇಬಾವಿ ಮಾರ್ಗಮಧ್ಯೆ ಸಂಚರಿಸುವ ಬಸ್‍ನಲ್ಲಿ ಟಿಕೆಟ್ ತೆಗೆದುಕೊಳ್ಳುವ ವಿಚಾರಕ್ಕೆ ಗಲಾಟೆ ನಡೆದಿದೆ. ಬಾಳೇಕುಂದ್ರಿಗೆ ಸಿಬಿಟಿಯಿಂದ ಯುವಕ ಮತ್ತು ಯುವತಿ ಬಸ್ ಹತ್ತಿದ್ದರು. ಯುವತಿಯು ಯುವಕನದ್ದೂ ಸೇರಿ ಎರಡು ಟಿಕೆಟ್ ಕೇಳಿ ಪಡೆದಿದ್ದಳು. ಮಹಿಳೆಯರಿಗೆ ಉಚಿತ ಟಿಕೆಟ್ ಇದ್ದುದರಿಂದ ನಿರ್ವಾಹಕ ಮಹಾದೇವ್ ಎರಡೂ ಉಚಿತ ಟಿಕೆಟ್ ನೀಡಿಬಿಟ್ಟಿದ್ದರು. ಬಳಿಕ ಇನ್ನೊಬ್ಬರು ಯಾರು ಅಂತ ಆ ಯುವತಿಯನ್ನು ಕೇಳಿದಾಗ ಪಕ್ಕದಲ್ಲಿದ್ದ ಯುವಕನನ್ನು ತೋರಿಸಿದ್ದಳು.

ಇದರಿಂದ ನಿರ್ವಾಹಕ ಮಹಾದೇವ್, ಯುವಕರಿಗೆ ಉಚಿತ ಟಿಕೆಟ್ ನೀಡಿದರೆ ನನ್ನನ್ನು ಅಮಾನತು ಮಾಡುತ್ತಾರೆ. ಉಚಿತ ಟಿಕೆಟ್ ಹೆಣ್ಣು ಮಕ್ಕಳಿಗೆ ಮಾತ್ರ, ನೀವು ಟಿಕೆಟ್ ಪಡೆಯುವಾಗ ಸರಿಯಾಗಿ ಹೇಳಿ ತೆಗೆದುಕೊಳ್ಳಬೇಕು ಅಂತ ಯುವತಿಗೆ ತಿಳಿ ಹೇಳಿದ್ದರು. ಅದಕ್ಕೆ ಆ ಯುವತಿ ಮರಾಠಿಯಲ್ಲಿ ಮಾತಾಡು, ಮರಾಠಿ ಕಲಿತುಕೊಳ್ಳಬೇಕು ಎಂದಿದ್ದಳು.

ಮುಂದೆ ಬಾಳೇಕುಂದ್ರಿಗೆ ಬರುತ್ತಿದ್ದಂತೆ 20 ಜನರ ಗುಂಪು ನಿರ್ವಾಹಕ ಮಹಾದೇವ್ ಮೇಲೆ ಹಲ್ಲೆ ನಡೆಸಿರುವುದಾಗಿ ಪ್ರಾಥಮಿಕ ಮಾಹಿತಿಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದೇವೆ. ಮೂರು ತಂಡಗಳನ್ನು ರಚನೆ ಮಾಡಿ ಪರಾರಿಯಾದ ಆರೋಪಿಗಳಿಗೆ ಶೋಧ ನಡೆಸಿದ್ದೇವೆ. ಭಾಷೆಯ ವಿಚಾರಕ್ಕೆ ಗಲಾಟೆಯಾಗಿದೆ ಅನ್ನುವ ಮಾಹಿತಿ ಇದೆ. ಸದ್ಯ ಬಸ್ ನಿರ್ವಾಹಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾಹಿತಿ ನೀಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಒಂದು ಕೌಂಟರ್ ಕೇಸ್ ಕೂಡ ದಾಖಲಾಗಿದೆ. ಬಸ್ ನಿರ್ವಾಹಕ ಅಸಭ್ಯವಾಗಿ ವರ್ತನೆ ಮಾಡಿದ್ದಾರೆಂದು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸತ್ಯಾಂಶ ಏನಿದೆ ಎನ್ನುವುದನ್ನು ನಾವು ತನಿಖೆ ಮಾಡುತ್ತಿದ್ದೇವೆ. ಸೆಕ್ಷನ್ 12 ಪ್ರಕಾರ ದೂರು ಕೊಟ್ಟಿದ್ದಾರೆ. ತನಿಖೆಯಲ್ಲಿ ಸರಿಯಾದ ಮಾಹಿತಿ ಸಿಗುತ್ತದೆ. ಈ ಸಮಯದಲ್ಲಿದ್ದ ಬಸ್ ನಲ್ಲಿ ಬೇರೆ ಪ್ರಯಾಣಿಕರ ಹೇಳಿಕೆ ಪಡೆಯುತ್ತೇವೆ. ಸುಳ್ಳು ಆರೋಪಗಳ ಕುರಿತು ಕೂಡ ತನಿಖೆ ಮಾಡುತ್ತೇವೆ ಎಂದು ಯಡಾ ಮಾರ್ಟಿನ್ ತಿಳಿಸಿದ್ದಾರೆ.

ನಿರ್ವಾಹಕನ ಮೇಲೆ ಪೋಕ್ಸೋ ಪ್ರಕರಣ; ಕನ್ನಡಪರ ಸಂಘಟನೆಗಳ ಪ್ರತಿಭಟನೆ..!

ಹಲ್ಲೆಗೆ ಒಳಗಾದ ಬಸ್ ನಿರ್ವಾಹಕ ಮಹಾದೇವ ಹುಕ್ಕೇರಿ ಅವರ ವಿರುದ್ಧ ಯುವತಿ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ಇಲ್ಲಿನ ಕೋಟೆ ಬಳಿಯ ಅಶೋಕ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ, ರಾಜಕೀಯ ಒತ್ತಡದ ಕಾರಣಕ್ಕೆ ನಿರ್ವಾಹಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರ ಮೂಲಕ ಪ್ರಕರಣದ ದಿಕ್ಕು ತಪ್ಪಿಸುವ ಕೆಲಸವಾಗುತ್ತಿದೆ. ತಕ್ಷಣವೇ ಈ ಪ್ರಕರಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ನಿರ್ವಾಹಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರ ವಿರುದ್ಧವೂ ಕ್ರಮವಾಗಬೇಕು. ಬಸ್ ನಿರ್ವಾಹಕನ ಮೇಲೆ ಹಲ್ಲೆಯ ಘಟನೆ ನಡೆದು ಒಂದು ದಿನವಾದರೂ ಜಿಲ್ಲೆಯ ಜನಪ್ರತಿನಿಧಿಗಳು ಧ್ವನಿ ಎತ್ತದಿರುವುದು ಖಂಡನೀಯ ಎಂದು ದೀಪಕ ಗುಡಗನಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News