×
Ad

ಬೆಳಗಾವಿಯಲ್ಲಿ ನಿರ್ವಾಹಕನ ಮೇಲೆ ಮರಾಠಿ ಭಾಷಿಕರಿಂದ ಹಲ್ಲೆ ಆರೋಪ ಪ್ರಕರಣ : ಕರವೇ ಕಾರ್ಯಕರ್ತರು ವಶಕ್ಕೆ

Update: 2025-02-25 20:42 IST

PC : x/@Belagavi_BK

ಬೆಳಗಾವಿ : ಮರಾಠಿ ಭಾಷೆ ಮಾತನಾಡದ ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿರುವ ಘಟನೆ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಇನ್ನೊಂದೆಡೆ, ನಿರ್ವಾಹಕನ ಮೇಲೆ ದಾಖಲಾಗಿದ್ದ ಪೋಕ್ಸೋ ಕೇಸ್‌ ವಾಪಸ್ಸು ಪಡೆಯುವುದಾಗಿ ದೂರುದಾರರು ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಮಂಗಳವಾರ ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ.ನಾರಾಯಣಗೌಡ, ಪ್ರವೀಣ ಶೆಟ್ಟಿ ಬಣಗಳ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು, ಗಡಿಯಲ್ಲಿ ನಾಡವಿರೋಧಿ ಚಟುವಟಿಕೆ ಕೈಗೊಳ್ಳುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದರು.

ಇದಕ್ಕೂ ಮೊದಲು, ಹಲ್ಲೆಗೊಳಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸ್ ನಿರ್ವಾಹಕ ಮಹಾದೇವಪ್ಪ ಹುಕ್ಕೇರಿ ಅವರ ಆರೋಗ್ಯ ವಿಚಾರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಗೌಡ, ಇಲ್ಲಿನ ಜಿಲ್ಲಾಡಳಿತ ಈ ಕೃತ್ಯ ಎಸಗಿದವರ ವಿರುದ್ಧ ಮುಲಾಜಿಲ್ಲದೇ ಗೂಂಡಾ ಕಾಯ್ದೆ ಹಾಕಬೇಕು. ಆರು ತಿಂಗಳು ಇಲ್ಲವೇ ಒಂದು ವರ್ಷ ಅವರನ್ನು ಜೈಲಿನಲ್ಲಿಡಬೇಕು. ಅದೇ ರೀತಿ ಅವರನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಪೋಕ್ಸೋ ಕಾಯ್ದೆ: ನಿರ್ವಾಹಕನ ಮೇಲೆ ದಾಖಲಿಸಿದ್ದ ಪೋಕ್ಸೊ ಪ್ರಕರಣವನ್ನು ವಾಪಸ್ಸು ಪಡೆದುಕೊಳ್ಳಲಾಗುವುದು ಎಂದು ಬಾಲಕಿಯ ಪೋಷಕರು ವಿಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ವಿಡಿಯೊದಲ್ಲಿ ಮಾತನಾಡಿರುವ ಅಪ್ರಾಪ್ತೆಯ ಪೋಷಕರು, ಬೆಳಗಾವಿಯಿಂದ ಬಾಳೇಕುಂದ್ರಿಗೆ ನಮ್ಮ ಮಗಳು ಬರುತ್ತಿದ್ದಳು. ಟಿಕೆಟ್ ಪಡೆಯುವ ಸಂಬಂಧ ಆಗಿರುವ ಜಗಳ ಇದು. ನಾವೂ ಕನ್ನಡದ ಅಭಿಮಾನಿಗಳು, ನಮ್ಮಲ್ಲಿ ಜಾತಿ ಭೇದ ಭಾವ ಇಲ್ಲ. ವಿನಾಕಾರಣ ಕನ್ನಡ, ಮರಾಠಿ ಎಂದು ಸುಳ್ಳು ಪ್ರಚಾರ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಇನ್ನೂ, ಈ ಕುರಿತು ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪ್ರತಿಕ್ರಿಯಿಸಿದ್ದು, ವಿಡಿಯೊ ಮೂಲಕ ಪೋಕ್ಸೋ ವಾಪಸ್ ಪಡೆಯುವುದಾಗಿ ದೂರುದಾರರು ತಿಳಿಸಿದ್ದಾರೆ. ಆ ವಿಡಿಯೋ ಪರಿಶೀಲಿಸಿ, ತನಿಖೆಯಲ್ಲಿ ಸಾಕ್ಷಿಯಾಗಿ ಪರಿಗಣಿಸುತ್ತೇವೆ ಎಂದು ಮಾಹಿತಿ ನೀಡಿದರು.

ಸಿಪಿಐ ವರ್ಗಾವಣೆ: ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದ ಮಾರಿಹಾಳ ಪೊಲೀಸ್ ಠಾಣೆ ಸಿಪಿಐ ಅವರನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ. ಅವರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರ ಸರಕಾರದೊಂದಿಗೆ ಚರ್ಚೆ: ರಾಮಲಿಂಗಾರೆಡ್ಡಿ

ಮಹಾರಾಷ್ಟ್ರ ಸರಕಾರದ ಜೊತೆ ಮಾತನಾಡುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ಹಾಗೂ ಗಡಿ ಭಾಗಗಳಲ್ಲಿ ಬಸ್ ಸಂಚಾರ ಕುರಿತು ಮಂಗಳವಾರ ಇಲ್ಲಿನ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಬೆಳಗಾವಿಗೆ ಹೋಗಿ ಬಂದಿದ್ದು, ಹಲ್ಲೆಗೊಳಗಾಗಿದ್ದ ನಿರ್ವಾಹಕನ ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಘಟನೆ ಕುರಿತು ಬೆಳಗಾವಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದು, ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ ಎಂದರು.

ನಮ್ಮ ರಾಜ್ಯದ ಬಸ್‍ಗಳು ಮಹಾರಾಷ್ಟ್ರಕ್ಕೆ ಹೋಗುತ್ತಿಲ್ಲ.ಅದೇರೀತಿ, ಅಲ್ಲಿನ ಬಸ್‍ಗಳು ಸಹ ರಾಜ್ಯಕ್ಕೆ ಪ್ರವೇಶಿಸುತ್ತಿಲ್ಲ. ಒಟ್ಟಾರೆ ಪ್ರಯಾಣ ಸ್ಥಗಿತಗೊಂಡು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಹೀಗೆ ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಸಿದ್ದರಾಮಯ್ಯ ಕೂಡಲೇ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಮೂಲಕ ಮಹಾರಾಷ್ಟ್ರದ ಡಿಜಿ ಅವರೊಂದಿಗೆ ಮಾತನಾಡಲು ಸೂಚಿಸಿದ್ದಾರೆ. ಜತೆಗೆ, ಅಲ್ಲಿನ ಸರಕಾರದ ಜೊತೆ ಮಾತನಾಡುವಂತೆ ಮುಖ್ಯ ಕಾರ್ಯದರ್ಶಿಗೂ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News