ಸಂವಿಧಾನವು ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ನೀಡಿದೆ : ನ್ಯಾ.ಪ್ರಸನ್ನ ಬಿ.ವರಳೆ
ಬೆಳಗಾವಿ : ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಮಾನವೀಯ ಮೌಲ್ಯಗಳು, ಗೌರವ ಮತ್ತು ಸಮಾನ ಅವಕಾಶಗಳನ್ನು ನೀಡಿದೆ. ಸಂವಿಧಾನವೆಂದರೆ ಕೇವಲ ದಾಖಲೆ ಮಾತ್ರವಲ್ಲ, ಇದು ಸಮಾಜದ ಮೂಲ ಮಂತ್ರವಾಗಿದೆ. ಇದು ಕಾನೂನು ಒಪ್ಪಂದವಲ್ಲ, ಸಾಮಾಜಿಕ ಪಠ್ಯವಾಗಿದೆ ಎಂದು ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿ ಪ್ರಸನ್ನ ಬಿ.ವರಳೆ ಹೇಳಿದರು.
ಶನಿವಾರ ಬೆಳಗಾವಿಯಲ್ಲಿರುವ ಕೆಎಲ್‍ಇ ಸಂಸ್ಥೆಯ ಬಿ.ವಿ.ಬೆಲ್ಲದ್ ಕಾನೂನು ಕಾಲೇಜಿನ ಡಾ.ಕೊಡ್ಕಣಿ ಸಭಾಂಗಣದಲ್ಲಿ ‘ಭಾರತ ಸಂವಿಧಾನಕ್ಕೆ 75 ವರ್ಷ: ಸಂವಿಧಾನಿಕತೆಯ ಪುನರ್ ಆವಿಷ್ಕಾರ’ ಎಂಬ ವಿಷಯದ ಮೇಲಿನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಮೇಲಾದ ದೌರ್ಜನ್ಯವನ್ನು ಉಲ್ಲೇಖಿಸುತ್ತಾ ಸಂವಿಧಾನವು ಮಹಿಳೆಯರ ಹಕ್ಕುಗಳನ್ನು ರಕ್ಷಿಸುತ್ತಿದೆ ಎಂದು ಬಿಲ್ಕೀಸ್ ಬಾನು ಪ್ರಕರಣವನ್ನು ಉಲ್ಲೇಖಿಸಿದರು. ಹೈಕೋರ್ಟ್ ಈ ಪ್ರಕರಣದ ಅಪರಾಧಿಗಳಿಗೆ ಬಿಡುಗಡೆ ಮಾಡಿದ ಹೊರಡಿಸಿದ್ದ ಅದೇಶವನ್ನು ಸುಪ್ರೀಂಕೋರ್ಟ್ ಹೇಗೆ ರದ್ದುಪಡಿಸಿತು ಎಂದು ವಿವರಿಸಿದ ಅವರು, ಇದು ಸುಪ್ರೀಂ ಕೋರ್ಟ್ ಮಹಿಳೆಯರ ಗೌರವ ಮತ್ತು ಹಕ್ಕುಗಳ ರಕ್ಷಣೆಗೆ ನಿಂತಿರುವುದನ್ನು ಸೂಚಿಸುತ್ತದೆ ಎಂದು ತಿಳಿಸಿದರು.
ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದ ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಡಾ.ವಿಶ್ವನಾಥ ಐ. ಪಾಟೀಲ್ ಮಾತನಾಡಿ, ಈ ಸುವರ್ಣ ಜಯಂತಿ ಆಚರಣೆಯ ಸಂದರ್ಭಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಸಮಾವೇಶ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಹಾಗೂ ಪ್ರಸ್ತುತ ಸಾಮರ್ಥ್ಯಗಳನ್ನು ವೃದ್ಧಿಸಿ, ವಕಾಲತ್ತು ನಿರ್ವಹಿಸುವಲ್ಲಿ ಯಶಸ್ವಿಯಾಗಲು ಅಗತ್ಯವಾದ ಕೌಶಲಗಳನ್ನು ನೀಡಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ಹೈಕೋರ್ಟ್‍ನ ನ್ಯಾಯಮೂರ್ತಿ ವಿಜಯಕುಮಾರ್ ಪಾಟೀಲ್, ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಡಾ.ಸಂದೀಪ್ ಶಾಸ್ತ್ರಿ ಮಾತನಾಡಿದರು.
ಸಮಾವೇಶದಲ್ಲಿ ಸ್ನೇಹಾ ದೊಡ್ಮಣಿ ಮತ್ತು ತಂಡದವರು ಪ್ರಾರ್ಥಿಸಿದರು. ಹುಬ್ಬಳ್ಳಿಯ ಕೆಎಲ್‍ಇ ತಾಂತ್ರಿಕ ವಿಶ್ವವಿದ್ಯಾಲಯದ ಕಾನೂನು ವಿಭಾಗದ ಡೀನ್ ಡಾ.ಜೆ.ಎಂ. ಮಲ್ಲಿಕಾರ್ಜುನಯ್ಯ ಸ್ವಾಗತಿಸಿದರು. ಪ್ರಾಂಶುಪಾಲೆ ಡಾ.ಜ್ಯೋತಿ ಹಿರೇಮಠ ಅತಿಥಿಗಳನ್ನು ಪರಿಚಯಿಸಿದರು. ಸಂಯೋಜಕಿ ಡಾ.ಸುಪ್ರಿಯಾ ಸ್ವಾಮಿ ವಂದಿಸಿದರು. ಪ್ರೇರಣಾ ಹನುಮಶೇಠ ನಿರೂಪಿಸಿದರು.