×
Ad

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ | ಅಧಿವೇಶನದ ಬಳಿಕ ಶಾಸಕರ ಸಭೆ ನಡೆಸಲು ಸಿಎಂಗೆ ಲಕ್ಷ್ಮಣ ಸವದಿ ಮನವಿ

Update: 2024-12-12 21:42 IST

ಲಕ್ಷ್ಮಣ ಸವದಿ/ಸಿಎಂ ಸಿದ್ದರಾಮಯ್ಯ

ಬೆಳಗಾವಿ : ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಸಂಬಂಧ ಈ ಅಧಿವೇಶನ ಮುಕ್ತಾಯವಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧ್ಯಕ್ಷತೆಯಲ್ಲಿ ಸಮುದಾಯದ ಎಲ್ಲ ಶಾಸಕರ ಸಭೆ ನಡೆಸಿ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯ ಲಕ್ಷ್ಮಣ ಸವದಿ ಮನವಿ ಮಾಡಿದರು.

ಗುರುವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡುವಾಗ ಒಂದು ಸಂಗತಿಯನ್ನು ಬೆಳಕಿಗೆ ತಂದಿದ್ದಾರೆ. ‘ಕೇಂದ್ರ ಗೃಹ ಸಚಿವ ಅಮಿತ್ ಶಾ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ನೀಡಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರತ್ಯೇಕ ಪ್ರವರ್ಗ ಮಾಡಿ ನೀಡಬೇಕಾಗುತ್ತದೆ’ ಎಂದು ಹೇಳಿದ್ದರು ಎಂದರು.

ಅಲ್ಲದೇ, ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ತಲಾ ಶೇ.2ರಷ್ಟು ಮೀಸಲು ನೀಡಲು ಬಸವರಾಜ ಬೊಮ್ಮಾಯಿಗೆ ಸಲಹೆ ನೀಡಿದ್ದರು. ಅದರಂತೆ, ಅವರು ಮೀಸಲಾತಿ ಅನುಷ್ಠಾನ ತರಲು ಪ್ರಯತ್ನ ಮಾಡಿದ್ದರು. ಸುಪ್ರೀಂಕೋರ್ಟ್‍ನಲ್ಲಿ ಈ ಬಗ್ಗೆ ಪಿಐಎಲ್ ದಾಖಲು ಮಾಡಿದ್ದರಿಂದ ತಡೆಯಾಜ್ಞೆ ಬಂತು. ಅದಕ್ಕಾಗಿ, ಈ ಎಲ್ಲ ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.

ನಾವು ಆ ಸಮಾಜಕ್ಕೆ ಮೀಸಲಾತಿ ಸಿಗಬೇಕು ಎಂದು ಬಯಸುತ್ತೇವೆ. ಪ್ರವರ್ಗ 2ಎ ಅಡಿಯಲ್ಲಿ 104 ಸಮಾಜಗಳಿವೆ. ಅವರಿಗೆ ಅನ್ಯಾಯ ಆಗಬಾರದು. ಆದುದರಿಂದ, ಪಂಚಮಸಾಲಿ ಸಮಾಜದ ಶಾಸಕರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕಾನೂನು ಸಚಿವರು ಎಲ್ಲರೂ ಸೇರಿ ಒಂದು ಪ್ರತ್ಯೇಕ ಸಭೆ ನಡೆಸಿ, ಕೇಂದ್ರ ಸರಕಾರ ಜಾರಿಗೆ ತಂದಿರುವ ಶೇ.10ರಷ್ಟು ಇಡಬ್ಲ್ಯುಎಸ್ ಪ್ರವರ್ಗದಿಂದ ಶೇ.2ರಷ್ಟು ಪಡೆದು, ಈ ಸಮಾಜಕ್ಕೆ ಹಂಚಿಕೆ ಮಾಡಲು ರಾಜ್ಯ ಸರಕಾರದಿಂದ ಪ್ರಸ್ತಾವನೆ ಕಳುಹಿಸಿ, ಕೇಂದ್ರದ ಮೇಲೆ ಒತ್ತಡ ಹೇರೋಣ ಎಂದು ಅವರು ಕೋರಿದರು.

ಹೋರಾಟಗಾರರ ಮೇಲೆ ನಡೆದಂತಹ ಲಾಠಿಚಾರ್ಜ್ ದುರಂತ. ಅದಕ್ಕಾಗಿ ವಿಷಾದವಿದೆ. ಸರಕಾರದ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು. ಅದು ನಮ್ಮ ಗುರಿಯಾಗಿರಬೇಕು ಎಂದು ಲಕ್ಷ್ಮಣ ಸವದಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News