×
Ad

ಸಿಎಂ ಬದಲಾವಣೆ ವಿಚಾರದಲ್ಲಿ ಯಾವುದೇ ಚರ್ಚೆಯ ಅವಶ್ಯಕತೆ ಇಲ್ಲ : ಶಿವರಾಜ ತಂಗಡಗಿ

Update: 2025-10-14 19:32 IST


ಬೆಳಗಾವಿ : "ಸಿಎಂ ಸಿದ್ದರಾಮಯ್ಯ ಬದಲಾವಣೆ ವಿಚಾರದಲ್ಲಿ ಯಾವುದೇ ಚರ್ಚೆಯ ಅವಶ್ಯಕತೆ ಇಲ್ಲ. ನಮ್ಮ ಸರಕಾರ ಹಾಗೂ ಪಕ್ಷದೊಳಗೆ ಯಾವುದೇ ಗೊಂದಲ ಅಥವಾ ಅಸಮಾಧಾನ ಇಲ್ಲ. ನೀವು (ಮಾಧ್ಯಮಗಳು) ಪ್ರಶ್ನೆ ಕೇಳುವುದನ್ನು ನಿಲ್ಲಿಸಿದರೆ ಈ ವಿಷಯವೇ ನಿಂತುಹೋಗುತ್ತದೆ" ಎಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಸಿಎಂ ಬದಲಾವಣೆ ಕುರಿತ ತೀರ್ಮಾನ ಕೈಗೊಳ್ಳುವ ಅಧಿಕಾರ ಸಂಪೂರ್ಣವಾಗಿ ಪಕ್ಷದ ಹೈಕಮಾಂಡ್‌ಗೆ ಸೇರಿದ್ದು, ನಾವು ಎಲ್ಲರೂ ಹೈಕಮಾಂಡ್‌ನ ನಿರ್ದೇಶನಕ್ಕೆ ಬದ್ಧರಾಗಿದ್ದೇವೆ. ನಮ್ಮ ನಾಯಕ ಸಿದ್ದರಾಮಯ್ಯ ಅವರು ಉತ್ತಮ ರೀತಿಯಲ್ಲಿ ಸರಕಾರವನ್ನು ಮುನ್ನಡೆಸುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆ ನಡೆದಿಲ್ಲ ಎಂಬುದು ನನಗೆ ತಿಳಿದ ವಿಚಾರ. ಸಚಿವ ಸ್ಥಾನಕ್ಕಾಗಿ ಕೆಲವರು ಆಕಾಂಕ್ಷಿಗಳು ಆಗಿರುವುದು ಸಹಜ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅದು ತಪ್ಪೇನಲ್ಲʼ ಎಂದರು.

ಕಿತ್ತೂರು ಉತ್ಸವಕ್ಕೆ ಸರಕಾರದಿಂದ 5 ಕೋಟಿ ರೂ.ಗಳ ಅನುದಾನ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ ಅವರು, “ಪ್ರತಿವರ್ಷದಂತೆ ಈ ಬಾರಿಯೂ ಉತ್ಸವಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು. ರಾಜ್ಯದ ಸಾಂಸ್ಕೃತಿಕ ಪರಂಪರೆ ಮತ್ತು ಇತಿಹಾಸವನ್ನು ಮುಂದುವರಿಸಲು ಸರಕಾರ ಬದ್ಧವಾಗಿದೆ” ಎಂದು ಹೇಳಿದರು.

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಮಾತನಾಡಿದ ಅವರು, “ಇಲ್ಲಿಯವರೆಗೆ ರಾಜ್ಯದ 5 ಕೋಟಿ 34 ಲಕ್ಷ ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರು ನಗರದಲ್ಲಿ 41 ಲಕ್ಷ ಜನ, ಉಳಿದ ಜಿಲ್ಲೆಗಳಲ್ಲಿ 4 ಕೋಟಿ 93 ಲಕ್ಷ ಜನ ಭಾಗವಹಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 44,11,331 ಜನರ ಸಮೀಕ್ಷೆ ಪೂರ್ಣಗೊಂಡಿದೆ. ಇನ್ನೂ 8,39,192 ಜನರ ಮಾಹಿತಿ ಸಂಗ್ರಹಿಸಲು ಬಾಕಿಯಿದೆ” ಎಂದು ವಿವರಿಸಿದರು.

ಪಂಚ ಗ್ಯಾರಂಟಿ ಯೋಜನೆ ಕುರಿತು ಹಿರಿಯ ಕಾಂಗ್ರೆಸ್ ಶಾಸಕ ಆರ್‌.ವಿ.ದೇಶಪಾಂಡೆ ನೀಡಿದ ಟೀಕೆಯ ಬಗ್ಗೆ ಅವರು ಪ್ರತಿಕ್ರಿಯಿಸುತ್ತಾ, “ಅದು ಅವರ ವೈಯಕ್ತಿಕ ಅಭಿಪ್ರಾಯ. ನಮ್ಮ ಸರಕಾರ ಬಡವರಿಗೆ ನೀಡಿದ ಮಾತು ಉಳಿಸಿಕೊಂಡಿದೆ. ಗ್ಯಾರಂಟಿ ಯೋಜನೆಗಳು ಬಡ ಕುಟುಂಬಗಳ ಬದುಕಿನಲ್ಲಿ ಬದಲಾವಣೆ ತಂದಿವೆ. ಚುನಾವಣೆಗೆ ಮೊದಲು ನಾವು ಹೇಳಿದಂತೆ, ಆ ಯೋಜನೆಗಳನ್ನು ಸಂಪೂರ್ಣವಾಗಿ ಜಾರಿಗೆ ತಂದಿದ್ದೇವೆ. ಯಾರೇ ಏನು ಹೇಳಿದರೂ ನಾವು ಈ ಯೋಜನೆಗಳನ್ನು ಮುಂದುವರಿಸುತ್ತೇವೆ” ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News