‘ಬಳ್ಳಾರಿ ಚಲೋ’ ಯಶಸ್ವಿಗೆ ಸಂಡೂರಿನಲ್ಲಿ ಬಿಜೆಪಿ ಪೂರ್ವಭಾವಿ ಸಭೆ
ಸಂಡೂರು/ಬಳ್ಳಾರಿ: ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಹಾಗೂ ಅಭಿವೃದ್ಧಿ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ ವತಿಯಿಂದ ಸೆಪ್ಟೆಂಬರ್ 1ರಿಂದ 10ರವರೆಗೆ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ ಪಾದಯಾತ್ರೆ’ಯ ಯಶಸ್ಸಿಗಾಗಿ ಸಂಡೂರು ಬಿಜೆಪಿ ಮಂಡಲದ ವತಿಯಿಂದ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ ಎಂದು ಆರೋಪಿಸಿದರು. ಸರ್ಕಾರದ ವೈಫಲ್ಯಗಳು ಹಾಗೂ ಭ್ರಷ್ಟಾಚಾರದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಬಳ್ಳಾರಿ ಚಲೋ’ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸಂಡೂರು ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪಾದಯಾತ್ರೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ದುರ್ಬಳಕೆ ಆರೋಪವನ್ನು ಪ್ರಸ್ತಾಪಿಸಿದ ಅವರು, ಬಿಜೆಪಿ ಸರ್ಕಾರ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಸ್ಥಾಪಿಸಿದ್ದ ನಿಗಮದ 187 ಕೋಟಿ ರೂ. ಹಣವನ್ನು ಕಾಂಗ್ರೆಸ್ ಸರ್ಕಾರ ಹಾಗೂ ಅಂದಿನ ಸಚಿವ ಬಿ. ನಾಗೇಂದ್ರ ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಈ ಹಣವನ್ನು ಲೋಕಸಭಾ ಚುನಾವಣೆಯಲ್ಲಿ ಬಳಸಲಾಗಿದೆ ಎಂಬ ಆರೋಪದ ಕುರಿತು ಕಾಂಗ್ರೆಸ್ ನಾಯಕರು ಉತ್ತರಿಸಬೇಕು ಎಂದು ಆಗ್ರಹಿಸಿದರು.
ಸಂಸದ ಈ. ತುಕಾರಾಂ ಅವರಿಗೆ ಸವಾಲು ಹಾಕಿದ ಜನಾರ್ದನ ರೆಡ್ಡಿ, ವಾಲ್ಮೀಕಿ ನಿಗಮದ ಹಣದ ದುರ್ಬಳಕೆಯಿಂದಲೇ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿ. ತಾವು ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಒಟ್ಟಾಗಿ ಮತ್ತೆ ಚುನಾವಣೆಯನ್ನು ಎದುರಿಸಲು ಸಿದ್ಧ ಎಂದು ಸವಾಲು ಹಾಕಿದರು.
ಬಿಜೆಪಿ ಆಡಳಿತಾವಧಿಯಲ್ಲಿ ಪ್ರವಾಸೋದ್ಯಮ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ 2,000 ಕೋಟಿ ರೂ. ಗೂ ಹೆಚ್ಚು ಅನುದಾನ ವ್ಯಯಿಸಲಾಗಿದೆ. ಕಲಬುರಗಿ, ಮೈಸೂರು ಸೇರಿದಂತೆ ರಾಜ್ಯದ 13 ವಿಮಾನ ನಿಲ್ದಾಣಗಳ ಅಭಿವೃದ್ಧಿ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು ಎಂದು ಜನಾರ್ದನ ರೆಡ್ಡಿ ಹೇಳಿದರು. ವಾಜಪೇಯಿ ಆರೋಗ್ಯಶ್ರೀ ಯೋಜನೆ ಹಾಗೂ 108 ಆಂಬುಲೆನ್ಸ್ ಸೇವೆ ಸೇರಿದಂತೆ ಜನಸಾಮಾನ್ಯರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿತ್ತು ಎಂದು ಮುಖಂಡರು ಹೇಳಿದರು.
ಬಳ್ಳಾರಿಯಲ್ಲಿ ನಡೆಯಲಿರುವ ಪಾದಯಾತ್ರೆಯ ಸಮಾರೋಪ ಸಮಾರಂಭ ಹಾಗೂ ಬೃಹತ್ ಸಮಾವೇಶಕ್ಕೆ ಸಂಡೂರು ತಾಲೂಕಿನ ಗ್ರಾಮೀಣ ಮತ್ತು ನಗರ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆತಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಭೆಯಲ್ಲಿ ಮುಖಂಡರು ಮನವಿ ಮಾಡಿದರು.
ಶ್ರೀಮತಿ ಅನ್ನಪೂರ್ಣ ಅವರಿಗೆ ಸಚಿವ ಸ್ಥಾನ ನೀಡಿದರೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಇನ್ನಷ್ಟು ತೀವ್ರವಾದ ಹೋರಾಟ ರೂಪಿಸಲಾಗುವುದು ಎಂದು ಜನಾರ್ದನ ರೆಡ್ಡಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಬಿಜೆಪಿ ಸಂಡೂರು ಮಂಡಲ ಅಧ್ಯಕ್ಷ ಅಶೋಕ್ ಕುಮಾರ್, ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಜಿ.ಟಿ. ಪಂಪಾಪತಿ, ಹುಡೇದ ಸುರೇಶ್, ದಮ್ಮೂರು ಶೇಖರ್, ಜಿಸಿಬಿ ರಾಮಕೃಷ್ಣ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.