ಬಳ್ಳಾರಿ |ಶಾಸಕ ಜನಾರ್ದನ ರೆಡ್ಡಿಗೆ ಸೇರಿದ ʼಮಾಡೆಲ್ ಮನೆʼಯಲ್ಲಿ ಬೆಂಕಿ ಪ್ರಕರಣ : 6 ಅಪ್ರಾಪ್ತರು ಸೇರಿ 8 ಮಂದಿ ವಶಕ್ಕೆ
ಘಟನೆಗೆ ಹುಡುಗರ ರೀಲ್ಸ್ ಚಿತ್ರೀಕರಣ ಕಾರಣ : ಎಸ್‌ಪಿ ಸುಮನ್ ಡಿ. ಫನ್ನೆಕರ್
ಬಳ್ಳಾರಿ: ರೀಲ್ಸ್, ಫೋಟೊ ಶೂಟ್ ಮಾಡಲು ಜನಾರ್ದನ ರೆಡ್ಡಿ ಪತ್ನಿ ಅರುಣಾ ಅವರ ಒಡೆತನದ ಜಿ ಸ್ಕ್ವೇರ್‌ನ ಮಾದರಿ ಮನೆಗೆ ಬಂದಿದ್ದ ಹುಡುಗರು ಹೊತ್ತಿಸಿದ ಬೆಂಕಿಯಿಂದ ಅಗ್ನಿ ಅವಘಡ ಸಂಭವಿಸಿದೆ. ಆದರೂ ʼಪ್ರಕರಣದ ಕೂಲಂಕಷ ತನಿಖೆ ನಡೆಸಲಾಗುವುದು’ ಎಂದು ಬಳ್ಳಾರಿಯ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಫನ್ನೆಕರ್ ತಿಳಿಸಿದ್ದಾರೆ.
ವಶಕ್ಕೆ ಪಡೆದ ಎಲ್ಲರ ವಿಚಾರಣೆ ನಡೆಸಲಾಗಿದ್ದು, ಅವರ ಹೇಳಿಕೆಗಳು ಈವರೆಗೆ ಸಂಗ್ರಹಿಸಿರುವ ಭೌತಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳಿಗೆ ಹೊಂದಿಕೆಯಾಗಿವೆ. ಪ್ರಕರಣದ ಮುಂದಿನ ತನಿಖೆ ಪ್ರಗತಿಯಲ್ಲಿದ್ದು, ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಘಟನಾ ಸ್ಥಳದಲ್ಲಿ ಸೋಕೊ (SOCO) ತಂಡದ ಮೂಲಕ ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು, ಪ್ರಾಥಮಿಕ ತನಿಖೆಯ ಆಧಾರದ ಮೇಲೆ 6 ಅಪ್ರಾಪ್ತರು ಸೇರಿ 8 ಮಂದಿ ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಸೈಟ್ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಮತ್ತು ತುರ್ತು ಸೇವಾ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ಅವರು ತಿಳಿಸಿದ್ಧಾರೆ.
ಮಾದರಿ ಮನೆಯ ಮೇಲ್ಛಾವಣಿಗೆ (ರೂಫ್‌ಟಾಪ್) ತೆರಳಿ ರೀಲ್ಸ್ ಚಿತ್ರೀಕರಣ ಹಾಗೂ ಫೋಟೋ/ವೀಡಿಯೊಗಳನ್ನು ತೆಗೆದುಕೊಳ್ಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ತಮ್ಮ ಕೃತ್ಯದ ಗಂಭೀರತೆ ಮತ್ತು ಪರಿಣಾಮಗಳನ್ನು ಅರಿಯದೆ, ಗುಂಪಿನ ಇಬ್ಬರು ಸದಸ್ಯರು ಬೆಂಕಿ ಹಚ್ಚಿದ್ದು, ಅದೇ ನಂತರ ದೊಡ್ಡ ಮಟ್ಟದ ಅಗ್ನಿ ಅವಘಡಕ್ಕೆ ಕಾರಣವಾಗಿದೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಫನ್ನೆಕರ್ ಅವರು ತಿಳಿಸಿದ್ಧಾರೆ.
ಆದರೆ, ಈ ಕುರಿತು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಅವರು ಮಾಧ್ಯಮಗಳ ಮುಂದೆ ಸಂಭವಿಸಿದ ಕೃತ್ಯಕ್ಕೆ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರೇ ಕಾರಣರು ಎಂದು ಆರೋಪಿಸಿದ್ದರು.
ಇದೀಗ ಪ್ರಕರಣದ ವಾಸ್ತವಾಂಶಗಳು ತನಿಖೆಯ ಮೂಲಕ ಹೊರಬಿದ್ದಿರುವುದರಿಂದ, ಮೊದಲೇ ಈ ರೀತಿಯ ಗಂಭೀರ ಆರೋಪಗಳನ್ನು ಮಾಡಿರುವುದು ಸರಿಯೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಸತ್ಯಾಸತ್ಯತೆ ತಿಳಿಯದೇ ಜನರಲ್ಲಿ ಗೊಂದಲ ಸೃಷ್ಟಿಸುವ ಹೇಳಿಕೆಗಳನ್ನು ಯಾವುದೇ ರಾಜಕಾರಣಿಯೂ ನೀಡಬಾರದು ಎಂಬ ಅಭಿಪ್ರಾಯ ಜನಸಾಮಾನ್ಯರಲ್ಲಿ ವ್ಯಕ್ತವಾಗುತ್ತಿದೆ.