×
Ad

ಸಿರುಗುಪ್ಪ | ಮತದಾರರ ಪಟ್ಟಿ ಪರಿಷ್ಕರಣೆ ನಿರಂತರ ಪ್ರಕ್ರಿಯೆಯಾಗಬೇಕು : ರಾಜೇಶ್

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ

Update: 2026-01-24 16:49 IST

ಸಿರುಗುಪ್ಪ: ಚುನಾವಣಾ ಸಂದರ್ಭದಲ್ಲಿ ಮಾತ್ರ ಮತದಾರರ ಪಟ್ಟಿ ಪರಿಷ್ಕರಣೆ ಚುರುಕುಗೊಳಿಸುವ ಬದಲು, ಈ ಪ್ರಕ್ರಿಯೆ ನಿರಂತರವಾಗಿ ನಡೆಯುವ ಕಾರ್ಯವಾಗಬೇಕು ಎಂದು ಬಳ್ಳಾರಿ ಜಿಲ್ಲಾ ಸಹಾಯಕ ಆಯುಕ್ತ ರಾಜೇಶ್ ಅವರು ಹೇಳಿದರು.

ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಚುನಾವಣಾ ಆಯೋಗದ ವತಿಯಿಂದ ಆಯೋಜಿಸಲಾಗಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಂದು ಮತಗಟ್ಟೆ ಮಟ್ಟದಲ್ಲಿ ಈಗಿನಿಂದಲೇ ಮತದಾರರ ಪಟ್ಟಿಯ ಪರಿಶೀಲನೆ ನಡೆಸಿ, ಹೊಸ ಸೇರ್ಪಡೆ, ತೆಗೆದುಹಾಕಬೇಕಾದ ಹೆಸರುಗಳು ಹಾಗೂ ಎರಡೆರಡು ಕಡೆಗಳಲ್ಲಿ ಇರುವ ಹೆಸರುಗಳನ್ನು ಒಂದೇ ಕಡೆ ಉಳಿಸುವಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು. ಎಲ್ಲ ಅರ್ಹ ಮತದಾರರು ತಮ್ಮ ಹೆಸರನ್ನು ಪಟ್ಟಿಗೆ ಸೇರಿಸಿಕೊಳ್ಳುವಂತೆ ಅರಿವು ಮತ್ತು ಪ್ರೇರಣೆ ನೀಡಬೇಕು ಎಂದರು.

ಮತದಾರರ ಪಟ್ಟಿಯ ಸಮರ್ಪಕ ಪರಿಷ್ಕರಣೆ ಇಲ್ಲದಿದ್ದರೆ ಮತದಾನ ಪ್ರಮಾಣವನ್ನು ಸಂಪೂರ್ಣವಾಗಿ ಸುಧಾರಿಸುವುದು ಕಷ್ಟ ಎಂದು ಅಭಿಪ್ರಾಯಪಟ್ಟ ಅವರು, ಈ ಕಾರ್ಯಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ಚುನಾವಣಾ ಶಾಖೆಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.

ತಾಲೂಕು ಹಾಗೂ ಹೋಬಳಿ ಹಂತದಲ್ಲಿ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಿ, ಅರ್ಜಿಗಳನ್ನು ಕಾಯ್ದಿರಿಸದೆ ಈಗಿನಿಂದಲೇ ವಿಲೇವಾರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರತಿಯೊಬ್ಬ ಅರ್ಹ ನಾಗರಿಕನ ಹೆಸರು ಮತದಾರರ ಪಟ್ಟಿಯಲ್ಲಿ ಇರಬೇಕು. ಪಟ್ಟಿಯನ್ನು ಕಾಲಕಾಲಕ್ಕೆ ನವೀಕರಿಸುವುದೇ ಮತದಾರರ ಪಟ್ಟಿ ಪರಿಷ್ಕರಣೆ ಎಂಬುದನ್ನು ಅವರು ವಿವರಿಸಿದರು.

18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಯುವಕ-ಯುವತಿಯೂ ತಕ್ಷಣವೇ ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ಅರ್ಜಿ ಸಲ್ಲಿಸಬೇಕು. ಇದು ಕೇವಲ ಹಕ್ಕು ಮಾತ್ರವಲ್ಲ, ಪ್ರಮುಖ ನಾಗರಿಕ ಕರ್ತವ್ಯವೂ ಹೌದು ಎಂದರು.

ಪರಿಷ್ಕರಣೆ ಸಂದರ್ಭದಲ್ಲಿ ಮತದಾರರು ತಮ್ಮ ಹೆಸರು, ತಂದೆಯ ಹೆಸರು, ವಯಸ್ಸು ಮತ್ತು ವಿಳಾಸ ಸರಿಯಾಗಿದೆಯೇ ಎಂದು ಪರಿಶೀಲಿಸಬೇಕು. ತಪ್ಪುಗಳಿದ್ದಲ್ಲಿ ನಮೂನೆ–8 ಮೂಲಕ ತಿದ್ದುಪಡಿ ಮಾಡಿಕೊಳ್ಳಬೇಕು. ಒಂದು ಮತಕ್ಷೇತ್ರದಿಂದ ಮತ್ತೊಂದಕ್ಕೆ ವಾಸಸ್ಥಳ ಬದಲಾದಲ್ಲಿ, ಹಳೆಯ ಕ್ಷೇತ್ರದಿಂದ ಹೆಸರು ತೆಗೆದು ಹೊಸ ಕ್ಷೇತ್ರದಲ್ಲಿ ಸೇರಿಸುವಂತೆ ಕ್ರಮವಹಿಸಬೇಕು. ಕುಟುಂಬದ ಯಾರಾದರೂ ಮೃತಪಟ್ಟರೆ ಅಥವಾ ಸ್ಥಳಾಂತರಗೊಂಡರೆ ಅವರ ಹೆಸರು ಪಟ್ಟಿಯಿಂದ ತೆಗೆದುಹಾಕಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿರುಗುಪ್ಪ ಸಹಾಯಕ ಮತದಾರರ ನೋಂದಣಿ ಅಧಿಕಾರಿ ಹಾಗೂ ತಹಶೀಲ್ದಾರ್ ಗೌಸಿಯಾ ಬೇಗಂ, ಮತದಾರರ ನೋಂದಣಿ ಅಧಿಕಾರಿ ಸೋಮಸುಂದರ್, ರಾಷ್ಟ್ರೀಯ ಸಾಕ್ಷರತಾ ಅಧಿಕಾರಿ ಅಬ್ದುಲ್ ನಬಿ, ತಾಲೂಕಿನ ಮೇಲ್ವಿಚಾರಕರು, ಕಂದಾಯ ಪರಿವೀಕ್ಷಕ ಮಂಜುನಾಥ, ನಗರಸಭೆ ಅಧಿಕಾರಿ ರಾಜಭಕ್ಷಿ, ಬಿಎಲ್‌ಒಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News