Ballari | ಮದುವೆಯಾದ ಕೆಲವೇ ಗಂಟೆಗಳಲ್ಲಿ ವರನ ಭೀಕರ ಹತ್ಯೆ
ನಬಿ ರಸೂಲ್
ಬಳ್ಳಾರಿ: ಮದುವೆಯಾಗಿ ಕೆಲವೇ ಗಂಟೆಗಳು ಕಳೆದಿದ್ದ ನವವರನೊಬ್ಬ ಭೀಕರವಾಗಿ ಹತ್ಯೆಯಾಗಿರುವ ಘಟನೆ ಬಳ್ಳಾರಿ ನಗರದ ಸಮತಾ ನಗರದಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಸ್ಥಳೀಯ ಬೋಟಿ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಗಾರೆ ಕೆಲಸ ಮಾಡುತ್ತಿದ್ದ ನಬಿ ರಸೂಲ್ ಎಂದು ಗುರುತಿಸಲಾಗಿದೆ. ಸುಮಾರು 15 ದಿನಗಳ ಹಿಂದೆ ವಿಚ್ಛೇದನ ಪಡೆದಿದ್ದ ಯುವತಿಯನ್ನು ಪ್ರೀತಿಸುತ್ತಿದ್ದ ನಬಿ ರಸೂಲ್, ಕುಟುಂಬಗಳ ಒಪ್ಪಿಗೆಯೊಂದಿಗೆ ಗುರುವಾರ ಮದುವೆಯಾಗಿ ಆರತಕ್ಷತೆ ಕಾರ್ಯಕ್ರಮವೂ ನೆರವೇರಿಸಿದ್ದರು.
ಜು.16ರ ರಾತ್ರಿ ಸುಮಾರು 11.30ರ ವೇಳೆಗೆ ಸ್ನೇಹಿತನೊಬ್ಬನಿಂದ ಮೊಬೈಲ್ ಕರೆ ಬಂದ ಹಿನ್ನೆಲೆಯಲ್ಲಿ “ಮಾತನಾಡಿ ಬರುತ್ತೇನೆ” ಎಂದು ಪತ್ನಿಗೆ ತಿಳಿಸಿ ಮನೆಯಿಂದ ಹೊರಟಿದ್ದ ನಬಿ ರಸೂಲ್ ಮರಳಿ ಮನೆಗೆ ಬಂದಿರಲಿಲ್ಲ. ಬಳಿಕ ತಡರಾತ್ರಿ ಸುಮಾರು 2 ಗಂಟೆ ವೇಳೆಗೆ ಮನೆಯಿಂದ ಸುಮಾರು 700 ಮೀಟರ್ ದೂರದಲ್ಲಿ ರಕ್ತದ ಮಡುವಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಿಂದ ನವವಧು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೆಕರ್, ಡಿವೈಎಸ್‌ಪಿ ಸ್ವನದಾಳ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಸ್ಥಳ ಮಹಜರು ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಪ್ರೀತಿ ವಿವಾಹದ ಹಿನ್ನೆಲೆ, ವೈಯಕ್ತಿಕ ವೈಷಮ್ಯ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡಗಳಿಂದ ಶೋಧ ಕಾರ್ಯ ಮುಂದುವರಿದಿದೆ.