Ballari | ಯಶವಂತನಗರದಲ್ಲಿ 7 ಅಡಿ ಉದ್ದದ ಹೆಬ್ಬಾವು ಸೆರೆ
ಸಂಡೂರು/ಬಳ್ಳಾರಿ, ಜು.15: ತಾಲೂಕಿನ ಯಶವಂತನಗರ ಗ್ರಾಮದಲ್ಲಿ ಮನೆಯ ಹಿಂಭಾಗದಲ್ಲಿ ಸುಮಾರು 7 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡ ಪರಿಣಾಮ ಕೆಲಕಾಲ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅಗಸರ ತಿಪ್ಪೇಸ್ವಾಮಿ ಅವರ ಮನೆಯ ಹಿಂಭಾಗದಲ್ಲಿ ದೊಡ್ಡ ಗಾತ್ರದ ಹಾವು ಕಂಡುಬಂದ ತಕ್ಷಣ ಕುಟುಂಬಸ್ಥರು ಹಾಗೂ ಸ್ಥಳೀಯರು ಗ್ರಾಮದ ಯುವ ಉರಗ ತಜ್ಞ ಶ್ರೀಧರ್ ಎಂ ಅವರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಧಾವಿಸಿದ ಶ್ರೀಧರ್ ಎಂ ಅವರು ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಯಾವುದೇ ಹಾನಿಯಾಗದಂತೆ ಹೆಬ್ಬಾವನ್ನು ಯಶಸ್ವಿಯಾಗಿ ಸೆರೆಹಿಡಿದರು. ಬಳಿಕ ಅರಣ್ಯ ಇಲಾಖೆಯ ಮಾರ್ಗಸೂಚಿಯಂತೆ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡುಗಡೆ ಮಾಡಿದರು. ಇದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಧರ್ ಎಂ, “ಹೆಬ್ಬಾವು ವಿಷಕಾರಿ ಹಾವಲ್ಲ. ಇದು ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಹಾವುಗಳು ಕಂಡುಬಂದರೆ ಭಯಪಟ್ಟು ಕೊಲ್ಲದೆ, ತಕ್ಷಣ ಉರಗ ತಜ್ಞರು ಅಥವಾ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು” ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಸಮಯೋಚಿತವಾಗಿ ಸ್ಪಂದಿಸಿ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಿಸಿದ ಉರಗ ತಜ್ಞ ಶ್ರೀಧರ್ ಎಂ ಅವರ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದರು. ಪರಿಸರ ಸಂರಕ್ಷಣೆ ಹಾಗೂ ವನ್ಯಜೀವಿ ರಕ್ಷಣೆಗೆ ಇಂತಹ ಕಾರ್ಯಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.