×
Ad

ಸಿರುಗುಪ್ಪ | ವಿಶ್ವ ಜುನೋಸಿಸ್ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಾಣಿಜನ್ಯ ರೋಗಗಳ ಕುರಿತು ಜಾಗೃತಿ

Update: 2026-07-14 22:42 IST

ಸಿರುಗುಪ್ಪ : ತಾಲೂಕಿನ ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ವಿಶ್ವ ಜುನೋಸಿಸ್ ದಿನದ ಅಂಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಣಿಜನ್ಯ (ಝೂನೋಟಿಕ್) ರೋಗಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ಮಾತನಾಡಿ, ನಾಯಿ, ಹಂದಿ, ಬೆಕ್ಕು, ಇಲಿ, ಮಂಗ ಹಾಗೂ ಬಾವಲಿ ಸೇರಿದಂತೆ ವಿವಿಧ ಪ್ರಾಣಿಗಳ ಕಡಿತ ಅಥವಾ ಸಂಪರ್ಕದಿಂದ ರೇಬೀಸ್, ಕೆಎಫ್‌ಡಿ (ಕ್ಯಾಸನೂರು ಅರಣ್ಯ ರೋಗ), ಸಾರ್ಸ್, ನಿಫಾ, ಎಬೋಲಾ ಸೇರಿದಂತೆ ಹಲವು ಮಾರಕ ಸೋಂಕುಗಳು ಹರಡಬಹುದು ಎಂದು ತಿಳಿಸಿದರು.

ಪ್ರಾಣಿಗಳ ಕಡಿತದಂತಹ ಸಂದರ್ಭಗಳಲ್ಲಿ ಮೂಢನಂಬಿಕೆಗಳಿಗೆ ಮಾರು ಹೋಗದೆ, ಗಾಯವನ್ನು ತಕ್ಷಣ ಸ್ವಚ್ಛ ನೀರಿನಿಂದ ಚೆನ್ನಾಗಿ ತೊಳೆದು ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆಯಂತೆ ನಂಜನಿರೋಧಕ (ಆ್ಯಂಟಿ ರೇಬೀಸ್) ಲಸಿಕೆ ಹಾಗೂ ಅಗತ್ಯ ಚಿಕಿತ್ಸೆ ಪಡೆಯುವುದು ಅತ್ಯಗತ್ಯ ಎಂದು ಹೇಳಿದರು.

ಆರೋಗ್ಯ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನಪ್ಪ ಮಾತನಾಡಿ, ಪ್ರಾಣಿಗಳ ಕಡಿತವನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಸ್ವಚ್ಛತೆ ಕಾಪಾಡುವುದು ಹಾಗೂ ಸಾಕು ಪ್ರಾಣಿಗಳಿಗೆ ನಿಯಮಿತವಾಗಿ ಲಸಿಕೆ ಹಾಕಿಸುವ ಮೂಲಕ ಪ್ರಾಣಿಜನ್ಯ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ರಾಧಾ ಮಲ್ಲಪ್ಪ, ಶಿಕ್ಷಕರಾದ ಜಯಶ್ರೀ, ಅತಿಥಿ ಶಿಕ್ಷಕರಾದ ಅಜಾದ್, ಆಳೂರು ಹುಚ್ಚಿರಪ್ಪ, ಕರಿಯಪ್ಪ ವೈ., ರಾಮಕೃಷ್ಣ, ಅಂಬಿಕಾ, ನಾಗವೇಣಿ, ಲಕ್ಷ್ಮಣ, ಪ್ರಥಮ ದರ್ಜೆ ಸಹಾಯಕ ಸುನಿಲ್ ಜೋಸೆಫ್, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಾಣಿಜನ್ಯ ರೋಗಗಳ ಲಕ್ಷಣಗಳು, ತಡೆಗಟ್ಟುವ ಕ್ರಮಗಳು ಹಾಗೂ ಮುನ್ನೆಚ್ಚರಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News