Siruguppa | ಅಕ್ರಮ ಪಡಿತರ ಅಕ್ಕಿ ಸಾಗಟ ಪತ್ತೆ: 3.75 ಕ್ವಿಂಟಲ್ ಅಕ್ಕಿ, 4 ಬೈಕ್ ಜಪ್ತಿ
ಸಿರುಗುಪ್ಪ : ನಗರದಿಂದ ಸಿಂಧನೂರು ಕಡೆಗೆ ದೇಶನೂರು ಮಾರ್ಗವಾಗಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 3.75 ಕ್ವಿಂಟಲ್ ಪಡಿತರ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಸಿರುಗುಪ್ಪ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರೋಷನ್ ಹಾಗೂ ಖಲೀಲ್ ಅಹ್ಮದ್ ವಿರುದ್ಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಆಹಾರ ನಿರೀಕ್ಷಕ ಎಂ. ವಿಜಯ್ ಕುಮಾರ್ ನೇತೃತ್ವದ ತಂಡ ಹಾಗೂ ಸಿರುಗುಪ್ಪ ಪೊಲೀಸರು ಬುಧವಾರ ದಾಳಿ ನಡೆಸಿ, ಕೆಎ-34 ಆರ್-5876, ಕೆಎ-37 ಎಸ್-2070, ಕೆಎ-34 ಆರ್-7721 ಮತ್ತು ಕೆಎ-34 ಇಜೆ-7046 ಸಂಖ್ಯೆಯ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್‌ಗಳನ್ನು ತಪಾಸಣೆ ನಡೆಸಿದರು.
ತಪಾಸಣೆ ವೇಳೆ ಸುಮಾರು 3.75 ಕ್ವಿಂಟಲ್ ಪಡಿತರ ಅಕ್ಕಿ ಪತ್ತೆಯಾಗಿದ್ದು, ಅಂದಾಜು 12 ಸಾವಿರ ರೂ. ಮೌಲ್ಯದ ಅಕ್ಕಿ ಹಾಗೂ ನಾಲ್ಕು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು, ಪಡಿತರ ಅಕ್ಕಿ ಅಕ್ರಮ ಸಾಗಣೆ ಜಾಲದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.