ಸಿರುಗುಪ್ಪ | ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿ ಮಹಿಳೆಯರಿಂದ ಪ್ರತಿಭಟನೆ
ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆ ಪಟ್ಟಣದ 16ನೇ ವಾರ್ಡ್‌ನ ಎಲೆಮಟ್ಟಿ ಗುಡ್ಡದ ಬಳಿಯ ಸರ್ಕಾರಿ ಜಾಗದಲ್ಲಿ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಮಹಿಳೆಯರು ಪಟ್ಟಣ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜುಲೈ 10ರಂದು ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಬಯಲು ಶೌಚಕ್ಕೆ ತೆರಳುತ್ತಿದ್ದ ಸ್ಥಳವನ್ನು ಕೆಲವರು ಅತಿಕ್ರಮಣ ಮಾಡಿ ರಸ್ತೆಯ ಮೇಲೆಯೇ ಬಂಡೆಗಲ್ಲುಗಳನ್ನು ಹಾಕಿರುವುದರಿಂದ ಮಹಿಳೆಯರಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಬಂಡೆಗಲ್ಲುಗಳನ್ನು ತೆರವುಗೊಳಿಸಿ, ಅದೇ ಸರ್ಕಾರಿ ಜಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ವಾರ್ಡ್‌ನಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆಯೇ ಇಲ್ಲ. ನೀರಿನ ಸಮಸ್ಯೆಯಿಂದ ಕೆಲ ಮನೆಗಳಲ್ಲಿರುವ ವೈಯಕ್ತಿಕ ಶೌಚಾಲಯಗಳನ್ನೂ ಬಳಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಹಿಳೆಯರು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ರಾಮಲಿಂಗಮ್ಮ ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪರಶುರಾಮ ಪ್ರತಿಕ್ರಿಯಿಸಿ, ಬಯಲು ಶೌಚಕ್ಕೆ ಅವಕಾಶವಿಲ್ಲ. ವೈಯಕ್ತಿಕ ಶೌಚಾಲಯವಿಲ್ಲದವರು ಅರ್ಜಿ ಸಲ್ಲಿಸಿದರೆ ಸರ್ಕಾರದ ನಿಯಮಾನುಸಾರ ಪರಿಶೀಲಿಸಿ ಮನೆಮನೆಗೆ ಶೌಚಾಲಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸ್ಥಳೀಯ ನಿವಾಸಿ ಸಿದ್ದಮ್ಮ ಸಿರಿಗೇರಿ ಮಾತನಾಡಿ, ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಪಟ್ಟಣ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ನರೇಂದ್ರ ಸಿಂಹ, ಶ್ಯಾಮಸುಂದರ, ಈರಮ್ಮ ದೇವರಮನೆ, ನಾಗಮ್ಮ, ಎಸ್. ರೇಣುಕಮ್ಮ, ನರಸಮ್ಮ, ಮಹಾಕಾಳಮ್ಮ, ದೇಪುರ್ ಸಿದ್ದಮ್ಮ, ಗಂಗಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.