Ballari | ವಿಬಿ-ಜಿ ರಾಮ್‌ಜಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮಲ್ಲನಗೌಡ
ಬಳ್ಳಾರಿ/ಕಂಪ್ಲಿ : ವಿಬಿ-ಜಿ ರಾಮ್‌ಜಿ ಯೋಜನೆಯು ಗ್ರಾಮೀಣ ಜನತೆಗೆ ಉದ್ಯೋಗ ಹಾಗೂ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ಮಹತ್ವದ ಯೋಜನೆಯಾಗಿದ್ದು, ಗ್ರಾಮಸ್ಥರು ಇದರ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಪಂ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಕೆ.ಎಸ್. ಮಲ್ಲನಗೌಡ ಹೇಳಿದರು.
ದೇವಲಾಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿಬಿ-ಜಿ ರಾಮ್‌ಜಿ ಯೋಜನೆಯ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 125 ದಿನಗಳ ಉದ್ಯೋಗಾವಕಾಶ ದೊರೆಯಲಿದ್ದು, ಲಿಂಗ ತಾರತಮ್ಯವಿಲ್ಲದೆ ಪ್ರತಿದಿನ 382 ರೂ. ಕೂಲಿ ನೀಡಲಾಗುತ್ತದೆ ಎಂದು ತಿಳಿಸಿದರು.
ಗ್ರಾಮೀಣ ಜನತೆ ಉದ್ಯೋಗ ಅರಸಿ ವಲಸೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಸ್ಥಳೀಯ ಮಟ್ಟದಲ್ಲಿಯೇ ಉದ್ಯೋಗ ಕಲ್ಪಿಸಲಾಗುತ್ತಿದೆ. ಯೋಜನೆಯಡಿ ಜಲಸಂಬಂಧಿತ 107 ಕಾಮಗಾರಿಗಳು, ಗ್ರಾಮೀಣ ಮೂಲಸೌಕರ್ಯಗಳ 90 ಕಾಮಗಾರಿಗಳು, ಜೀವನೋಪಾಯಕ್ಕೆ ಸಂಬಂಧಿಸಿದ 86 ಕಾಮಗಾರಿಗಳು ಹಾಗೂ ತೀವ್ರ ಹವಾಮಾನ ಘಟನೆಗಳ ಶಮನಕ್ಕೆ ಸಂಬಂಧಿಸಿದ 35 ಕಾಮಗಾರಿಗಳು ಸೇರಿದಂತೆ ಒಟ್ಟು 318 ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ ಎಂದು ಹೇಳಿದರು.
ಗ್ರಾಮೀಣ ಜನರು ಯೋಜನೆಯ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಪಿಡಿಒ ಮಲ್ಲಿಕಾರ್ಜುನ, ತಾಲೂಕು ಐಇಸಿ ಸಂಯೋಜಕ ಎಚ್. ಹನುಮೇಶ, ತಾಂತ್ರಿಕ ಸಂಯೋಜಕ ಸಂಗಮೇಶ, ಸಾಮಾಜಿಕ ಲೆಕ್ಕ ಪರಿಶೋಧನಾ ಸಂಯೋಜಕಿ ಗೌರಿದೇವಿ, ಆಂಜನೇಯ ಸೇರಿದಂತೆ ಇತರರು ಉಪಸ್ಥಿತರಿದ್ದರು.