Ballari | ಕಂಪ್ಲಿಯಲ್ಲಿ ಕುಡಿಯುವ ನೀರಿಗೆ ತಾತ್ಕಾಲಿಕ ರಿಂಗ್ ಬಂಡಿ ನಿರ್ಮಾಣ
ಬಳ್ಳಾರಿ/ಕಂಪ್ಲಿ, ಜು.17: ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಯಾವುದೇ ತೊಂದರೆಯಾಗದಂತೆ ನದಿಯ ವಿವಿಧ ಭಾಗಗಳಲ್ಲಿ ತಾತ್ಕಾಲಿಕ ರಿಂಗ್ ಬಂಡಿಗಳನ್ನು ನಿರ್ಮಿಸಲಾಗಿದೆ ಎಂದು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಪಟ್ಟಣದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನದಿಯ ಆಯಕಟ್ಟಿನ ಸ್ಥಳಗಳಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಮರಳು ತುಂಬಿ ರಿಂಗ್ ಬಂಡಿಗಳನ್ನು ನಿರ್ಮಿಸಲಾಗಿದ್ದು, ಇದರಿಂದ ಸದ್ಯಕ್ಕೆ ನೀರಿನ ಕೊರತೆ ಎದುರಾಗುವುದಿಲ್ಲ. ಮುಂದಿನ ಮೂರು ತಿಂಗಳ ಕಾಲ ಜಾಕ್ವೆಲ್‌ನಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ನೀರಿನ ಮಡುಗಿನಿಂದ ನೀರು ಪಡೆಯುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಈ ಕಾಮಗಾರಿಗಾಗಿ ಮರಳಿನ ಚೀಲಗಳಿಂದ ತಾಂತ್ರಿಕವಾಗಿ ರಿಂಗ್ ಬಂಡಿ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗುವುದು. ಪಟ್ಟಣದ 23 ವಾರ್ಡ್‌ಗಳ ಸುಮಾರು 53 ಸಾವಿರ ಜನರಿಗೆ ನಾಲ್ಕು ಮೇಲ್ತೊಟ್ಟಿಗಳ ಮೂಲಕ 4.5 ಎಂಎಲ್‌ಡಿ ನೀರು ಸಂಗ್ರಹಿಸಿ ಬಿಟ್ಟು ದಿನ ನೀರು ಪೂರೈಸಲಾಗುತ್ತಿದೆ. ಯಾವುದೇ ಆಕಸ್ಮಿಕ ತೊಂದರೆ ಎದುರಾದರೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು ಎಂದು ತಿಳಿಸಿದರು.
ನದಿಯಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಅನಗತ್ಯವಾಗಿ ನೀರನ್ನು ವ್ಯರ್ಥ ಮಾಡದೆ, ನಲ್ಲಿಗಳಲ್ಲಿ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸುವ ಮೂಲಕ ನೀರು ಸಂರಕ್ಷಣೆಗೆ ಸಹಕರಿಸಬೇಕು ಎಂದು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಮನವಿ ಮಾಡಿದರು.