ಗ್ರಾಮ ಠಾಣೆಯಲ್ಲಿ ನೆಲೆಸಿರುವ ಕುಟುಂಬಗಳಿಗೆ ಎ ಖಾತಾ ನೀಡದೇ ರಿಯಲ್ ಎಸ್ಟೇಟ್‌ದಾರರಿಗೆ ನೀಡುತ್ತಿದ್ದಾರೆ: ವಿ.ರಾಜಶೇಖರ ಆರೋಪ
ಬಳ್ಳಾರಿ: ಗ್ರಾಮ ಠಾಣೆಯಲ್ಲಿ ನೆಲೆಸಿರುವ ಕುಟುಂಬಗಳಿಗೆ ಎ ಖಾತಾ ನೀಡದೆ, ರಿಯಲ್ ಎಸ್ಟೇಟ್‌ದಾರರಿಗೆ ಬಿ ಖಾತಾ ನೀಡುತ್ತಿದ್ದು, ಇದರಲ್ಲಿ ಸಾಕಷ್ಟು ಅವ್ಯವಹಾರವಾಗಿದೆ. ಕೂಡಲೇ ತನಿಖೆ ನಡೆಸಿ, ಸಂಬಂದಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವಹಿಸಲು, ಮೂಲ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ರಾಜಶೇಖರ ಆಗ್ರಹಿಸಿದರು.
ಕುಡತಿನಿ ಪಟ್ಟಣ ಪಂಚಾಯಿತಿ ಕಛೇರಿಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಹಿಂದಿನ ಬಂಗಾರಪ್ಪ ಸರ್ಕಾರದ ಅವಧಿ ವೇಳೆ ಕುಡತಿನಿ ಪಟ್ಟಣದಲ್ಲಿದ್ದ 10 ಎಕರೆ ಜಮೀನಿನಲ್ಲಿ ಎಸ್ಸಿ, ಎಸ್ಟಿಯ ಬಡ ಕುಟುಂಬಗಳಿಗೆ 30-40 ಅಳತೆಯ ಸೈಟ್ ಹಂಚಿಕೆ ಮಾಡಿಕೊಟ್ಟಿದ್ದರು. ಅದರಂತೆ ಇಲ್ಲಿನ ಸಾಕಷ್ಟು ಕುಟುಂಬಗಳು ಪಪಂಗೆ ತೆರಿಗೆ ಕಟ್ಟುವ ಮೂಲಕ ಜೀವನ ನಡೆಸುತ್ತಿದ್ದಾರೆ. ಆದರೆ, ಇಲ್ಲಿನ ಕುಟುಂಬಗಳಿಗೆ ನಮೂನೆ-3 ನೀಡಲು ಮೀನಾಮೇಷ ಎಳಿಸಲಾಗುತ್ತಿದೆ. ಗ್ರಾಮ ಠಾಣೆಯಲ್ಲಿ ಬರೀ 782 ಜನರಿಗೆ ಎ ಖಾತಾ ಇದ್ದು, ಬರೀ ಆರು ತಿಂಗಳಲ್ಲಿ 1240 ಜನರಿಗೆ ಬಿ ಖಾತಾ ಮಾಡಿದ್ದಾರೆ. ಇವರಿಗೆ ಬಡವರ ಕಾಳಜಿ ಇಲ್ಲ. ಬದಲಾಗಿ ರಿಯಲ್ ಎಸ್ಟೇಟ್ ದಾರರಿಗೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ. ಇದರಲ್ಲಿ ಕಂದಾಯ ಇಲಾಖೆಯೂ ನೇರ ಹೊಣೆಯಾಗಿದೆ. ಮೂಲ ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು 14, 15ನೇ ವಾರ್ಡಿನಲ್ಲಿರುವ ಕುಟುಂಬಗಳಿಗೆ ಫಾರಂ-3 ನೀಡಬೇಕು ಎಂದರು.
ಇಲ್ಲಿನ ಸಭೆಯಲ್ಲಿ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಆರ್.ಸುಜಾತ ಸತ್ಯಪ್ಪ, ಉಪಾಧ್ಯಕ್ಷ ಪಂಪಾಪತಿ ಕನಕೇರಿ, ಮುಖ್ಯಾಧಿಕಾರಿ ತೀರ್ಥಪ್ರಸಾದ್, ಕಂದಾಯ ನಿರೀಕ್ಷಕಿ ತಾಯಮ್ಮ, ಸದಸ್ಯರು, ಸಿಬ್ಬಂದಿ ಇದ್ದರು.