ಬಳ್ಳಾರಿ | ನಾಯಿ ಕಡಿತ ಪ್ರಕರಣ ತಡೆಗೆ ಸಮುದಾಯ ಮಟ್ಟದಲ್ಲಿ ಜಾಗೃತಿ ಅಗತ್ಯ: ಡಾ.ಯಲ್ಲಾ ರಮೇಶ್ ಬಾಬು
ಬಳ್ಳಾರಿ : ಸಮುದಾಯಗಳಲ್ಲಿ ಹೆಚ್ಚುತ್ತಿರುವ ನಾಯಿ ಕಡಿತ ಪ್ರಕರಣಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ವಿಸಿ ಸಭಾಂಗಣದಲ್ಲಿ ನಾಯಿ ಕಡಿತ ಪ್ರಕರಣಗಳ ತಡೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಯಿ, ಬೆಕ್ಕು ಸೇರಿದಂತೆ ಯಾವುದೇ ಪ್ರಾಣಿ ಕಚ್ಚಿದಲ್ಲಿ ರೇಬೀಸ್ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿದ್ದು, ಮುಖ್ಯವಾಗಿ ನಾಯಿಗಳ ಕಡಿತದಿಂದಲೇ ಹೆಚ್ಚಿನ ಪ್ರಮಾಣದಲ್ಲಿ ರೋಗ ಹರಡುತ್ತದೆ. ಆದ್ದರಿಂದ ಕಚ್ಚಿದ ಅಥವಾ ಪರಚಿದ ಸ್ಥಳವನ್ನು ತಕ್ಷಣ ಸೋಪು ಮತ್ತು ನೀರಿನಿಂದ ತೊಳೆದು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ರೇಬೀಸ್ ಲಸಿಕೆ ಪಡೆಯಬೇಕು ಎಂದು ಸೂಚಿಸಿದರು.
ಸಾರ್ವಜನಿಕರು ಸಾಕಿದ ಅಥವಾ ಅಪರಿಚಿತ ಪ್ರಾಣಿ ಕಚ್ಚಿದರೂ ನಿರ್ಲಕ್ಷ್ಯ ವಹಿಸದೆ ವೈದ್ಯರಿಂದ ಅಗತ್ಯ ಚುಚ್ಚುಮದ್ದು ಪಡೆಯಬೇಕು. ಇದರಿಂದ ರೇಬೀಸ್ ಎಂಬ ಶೇ.100 ರಷ್ಟು ತಡೆಗಟ್ಟಬಹುದಾದ ಖಾಯಿಲೆಯನ್ನು ನಿಯಂತ್ರಿಸಬಹುದು ಎಂದರು.
ಆಶಾ ಕಾರ್ಯಕರ್ತೆಯರು ಮನೆ ಭೇಟಿ ಹಾಗೂ ಸಮೀಕ್ಷೆ ಸಂದರ್ಭಗಳಲ್ಲಿ ನಾಯಿ ಕಡಿತ ಪ್ರಕರಣಗಳ ಕುರಿತು ಮಾಹಿತಿ ಸಂಗ್ರಹಿಸುವುದರ ಜೊತೆಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಾಯಿ ಕಡಿತ ಕುರಿತು ಮಾಹಿತಿ ಬಿಂಬಿಸುವ ಫ್ಲೆಕ್ಸ್‌ಗಳನ್ನು ಪ್ರದರ್ಶಿಸಬೇಕು. ಜೊತೆಗೆ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕಸ ಸಂಗ್ರಹ ವಾಹನಗಳಲ್ಲಿ ನಾಯಿ ಕಡಿತ ಜಾಗೃತಿ ಆಡಿಯೋ ಜಿಂಗಲ್‌ಗಳನ್ನು ಪ್ರತಿದಿನ ಪ್ರಸಾರ ಮಾಡಬೇಕು ಎಂದು ತಿಳಿಸಿದರು.
ಮನೆಯ ಸುತ್ತಮುತ್ತ ಆಹಾರ ತ್ಯಾಜ್ಯಗಳನ್ನು ಚೆಲ್ಲಬಾರದು. ಇದರಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತದೆ. ಮಕ್ಕಳ ಮೇಲೆ ವಿಶೇಷ ಗಮನ ವಹಿಸಬೇಕು. ನಾಯಿ ಕಚ್ಚಿದ ಸಂದರ್ಭಗಳಲ್ಲಿ ಮನೆಮದ್ದು ಅಥವಾ ನಾಟಿ ವೈದ್ಯರ ಬಳಿ ಹೋಗದೇ ನೇರವಾಗಿ ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.
ನಾಯಿ ಕಚ್ಚಿದ ನಂತರ ಗಾಯವನ್ನು ಹರಿಯುವ ಸ್ವಚ್ಛ ನೀರಿನಲ್ಲಿ ಕನಿಷ್ಠ 15 ನಿಮಿಷ ತೊಳೆಯುವುದರಿಂದ ಶೇ.50–70 ರಷ್ಟು ರೇಬೀಸ್ ಅಪಾಯ ಕಡಿಮೆಯಾಗುತ್ತದೆ. ವೈದ್ಯರ ಸಲಹೆ ಮೇರೆಗೆ 1, 3, 7, 14 ಮತ್ತು 28ನೇ ದಿನಗಳಲ್ಲಿ ಐದು ಡೋಸ್ ಲಸಿಕೆಗಳನ್ನು ಸಂಪೂರ್ಣವಾಗಿ ಪಡೆಯಬೇಕು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಆ್ಯಂಟಿ ರೇಬೀಸ್ ಲಸಿಕೆ ಲಭ್ಯವಿದ್ದು, ರೋಗಿಗೆ ಮೊದಲು ಚಿಕಿತ್ಸೆ ನೀಡಿ ಬಳಿಕ ದಾಖಲೆ ಪ್ರಕ್ರಿಯೆ ನಡೆಸಬೇಕು ಎಂದು ಆರೋಗ್ಯ ಸಿಬ್ಬಂದಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ವಿ.ಕೆ., ಪಶುಪಾಲನ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ಸದಾಶಿವ ಉಪ್ಪಾರ, ಸೇರಿದಂತೆ ವಿವಿಧ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.