ಬಳ್ಳಾರಿ | ಭ್ರಾತೃತ್ವವಿಲ್ಲದೆ ಪ್ರಜಾಸತ್ತಾತ್ಮಕ ಭಾರತ ಉಳಿಯದು : ಎಚ್.ಮೋಹನ್ ಕುಮಾರ್
ಬಳ್ಳಾರಿ : ಭಾರತೀಯರಲ್ಲಿ ಪರಸ್ಪರ ಭ್ರಾತೃತ್ವದ ಸಂಬಂಧ ಇಲ್ಲದಿದ್ದರೆ ದೇಶವು ಪ್ರಜಾಸತ್ತಾತ್ಮಕವಾಗಿ ಉಳಿಯುವುದಿಲ್ಲ ಎಂಬುದು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ಪಷ್ಟ ನಿಲುವಾಗಿತ್ತು ಎಂದು ಹೈಕೋರ್ಟ್ ವಕೀಲ ಎಚ್.ಮೋಹನ್ ಕುಮಾರ್ ಹೇಳಿದರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ, ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಮೈಸೂರು ಸಮಾಜ ಕಾರ್ಯಕರ್ತರ ಕ್ರಿಯಾ ಸಂಶೋಧನೆ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳ ಮೂಲಕ ಭಾರತೀಯರನ್ನು ಅರ್ಥಮಾಡಿಕೊಳ್ಳುವಿಕೆ’ ಎಂಬ ವಿಷಯದ ಕುರಿತ ಮೂರು ದಿನಗಳ ಕಾರ್ಯಾಗಾರವನ್ನು ಅಂಬೇಡ್ಕರ್ ಹಾಗೂ ಬುದ್ಧರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀನಿವಾಸ ಡಿ. ಮನಗಳ್ಳಿ ಮಾತನಾಡಿದರು.
ಕಾರ್ಯಕ್ರಮದ ಸಂಯೋಜಕರಾಗಿಯೂ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕರಾಗಿಯೂ ಇರುವ ಪ್ರೊ. ಗೌರಿ ಮಾಣಿಕ್ ಮಾನಸ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಲಂಡನ್‌ನ ಸಾಮಾಜಿಕ ಹಾಗೂ ಸಾಂಸ್ಕೃತಿಕ ಮನೋವಿಜ್ಞಾನ ಚಿಂತಕಿ ಚಾರುಮತಿ ಎಂ. ವೇದಿಕೆಯಲ್ಲಿದ್ದರು. ಎಸ್‌ಸಿ–ಎಸ್‌ಟಿ ಕೋಶದ ನಿರ್ದೇಶಕ ಡಾ.ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಅನಿಲ್ ವಂದಿಸಿದರು.
ವಿಶ್ವವಿದ್ಯಾಲಯದ ವಿವಿಧ ನಿಕಾಯಗಳ ಡೀನರು, ವಿಭಾಗದ ಮುಖ್ಯಸ್ಥರು, ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.