‘ಬಳ್ಳಾರಿ ಪಾಲಿಕೆ’ ಆಸ್ತಿ ತೆರಿಗೆ ದುರುಪಯೋಗದ ವಿರುದ್ಧ ಕಾನೂನಾತ್ಮಕ ಕ್ರಮ : ಸಚಿವ ಭೈರತಿ ಸುರೇಶ್
ಭೈರತಿ ಸುರೇಶ್
ಬೆಂಗಳೂರು : ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿನ ವಾರ್ಡ್ ಸಂ.19ರಲ್ಲಿನ ಅಪಾರ್ಟ್ಮೆಂಟ್ ಪ್ಲಾಟ್‌ಗಳ ಆಸ್ತಿ ತೆರಿಗೆಯಲ್ಲಿ ಕರ ಸಂಗ್ರಹಿಸಿ ಪಾಲಿಕೆಯ ಖಾತೆಗೆ ಜಮಾ ಮಾಡದೆ ದುರುಪಯೋಗ ಮಾಡಿಕೊಂಡಿರುವ ಅಧಿಕಾರಿ ಮತ್ತು ನೌಕರರ ವಿರುದ್ಧ ಈಗಾಗಲೇ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ತಿಳಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ವೈ.ಎಂ.ಸತೀಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಲಯ ಕಚೇರಿ-1ರ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ:18/19ರ ವ್ಯಾಪ್ತಿಯ ಅನಂತಪುರ ರಸ್ತೆಯ ಹತ್ತಿರವಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ಸುಮಾರು 35 ಪ್ಲಾಟ್‌ಗಳಿಗೆ ನಮೂನೆ-2ನ್ನು ನೀಡಿರುವುದು ಕಂಡುಬಂದಿದೆ ಎಂದರು.
ಆದರೆ, ನಮೂನೆ-2ನ್ನು ನೀಡಲು ತೆರಿಗೆಯ ಮೊತ್ತ 2.80,179 ರೂ. ಗಳನ್ನು ಮಾಲಕರಿಂದ ಸಂಗ್ರಹಿಸಿ, ಪಾಲಿಕೆಯ ಖಾತೆಗೆ ಜಮಾ ಮಾಡದೇ ತೆರಿಗೆಯ ಮೊತ್ತವನ್ನು ದುರುಪಯೋಗ ಮಾಡಿಕೊಳ್ಳುವುದಲ್ಲದೇ ಬಳ್ಳಾರಿ ಒನ್ ರಸೀದಿಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಭೈರತಿ ಸುರೇಶ್ ಹೇಳಿದರು.
ತೆರಿಗೆಯ ಮೊತ್ತವನ್ನು ಪಾಲಿಕೆಯ ಖಾತೆಗೆ ಪಾವತಿಸದೇ ಇರುವ ಕಾರಣ, ಸದರಿ ಮೊತ್ತದ ಜೊತೆಗೆ ಶೇ.18ರಷ್ಟು ಬಡ್ಡಿಯೊಂದಿಗೆ ಪಾಲಿಕೆಗೆ ಹಿಂದಿರುಗಿಸಲಾಗಿದೆ. ಈ ಬಗ್ಗೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಉದ್ದೇಶಿಸಲಾಗಿದೆ. ದೋಷಾರೋಪಣಾ ಪಟ್ಟಿಯನ್ನು ಜಾರಿ ಮಾಡಿ ಆಪಾದನೆಗಳ ಬಗ್ಗೆ, ಲಿಖಿತ ಸಮಜಾಯಿಷಿ ಯಾವುದಾದರೂ ಇದ್ದಲ್ಲಿ ಮನವಿ ಸಲ್ಲಿಸುವಂತೆ ನೋಟಿಸ್ ನೀಡಲಾಗಿದೆ ಎಂದು ಬೈರತಿ ಸುರೇಶ್ ತಿಳಿಸಿದರು.