ಬಳ್ಳಾರಿ | ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ
ಬಳ್ಳಾರಿ : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ‘ಸಾಮಾಜಿಕ ನ್ಯಾಯದ ಹರಿಕಾರ’ ದಿವಂಗತ ಡಿ. ದೇವರಾಜ ಅರಸು ಅವರು ಬಡವರು, ಹಿಂದುಳಿದವರು, ರೈತರು ಹಾಗೂ ಶೋಷಿತ ವರ್ಗಗಳ ಬದುಕಿನಲ್ಲಿ ಮಹತ್ವದ ಪರಿವರ್ತನೆ ತಂದ ಧೀಮಂತ ಹಾಗೂ ಮಾನವತಾವಾದಿ ನಾಯಕರು ಎಂದು ಉಪನ್ಯಾಸಕ ಕೊಟ್ರೇಶ್ ಹೇಳಿದರು.
ತಾಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಕುವೆಂಪು ಅವರ ಬಡತನ, ಮೌಢ್ಯ ಮತ್ತು ಅಸಮಾನತೆಯ ವಿರುದ್ಧದ ಆಶಯಗಳನ್ನು ಉಲ್ಲೇಖಿಸಿದ ಅವರು, ದೇವರಾಜ ಅರಸು ಅವರ ಆಡಳಿತದ ಮೂಲ ಆಶಯವೂ ಸಾಮಾಜಿಕ ಅಸಮಾನತೆಯನ್ನು ತೊಡೆದುಹಾಕಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅವಕಾಶ ಕಲ್ಪಿಸುವುದಾಗಿತ್ತು ಎಂದರು.
1915ರ ಆಗಸ್ಟ್ 21ರಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬೆಟ್ಟದತುಂಗ ಗ್ರಾಮದಲ್ಲಿ ಜನಿಸಿದ ದೇವರಾಜ ಅರಸು ಅವರು ಮೈಸೂರಿನ ಬೋರ್ಡಿಂಗ್ ಶಾಲೆಯಲ್ಲಿ ಶಿಕ್ಷಣ ಪಡೆದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದರು. ಸುಭಾಷ್ ಚಂದ್ರ ಬೋಸ್ ಹಾಗೂ ಮಹಾತ್ಮ ಗಾಂಧೀಜಿಯವರ ಆದರ್ಶಗಳಿಂದ ಪ್ರಭಾವಿತರಾಗಿದ್ದ ಅವರು, ಗ್ರಾಮೀಣ ಬದುಕಿನ ಸಮಸ್ಯೆಗಳನ್ನು ಅರಿತುಕೊಂಡು ರಾಜಕೀಯ ಪ್ರವೇಶಿಸಿದರು. 1952ರಲ್ಲಿ ಹುಣಸೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ, ಕೆಂಗಲ್ ಹನುಮಂತಯ್ಯ ಹಾಗೂ ವೀರೇಂದ್ರ ಪಾಟೀಲ್ ಅವರ ಸಚಿವ ಸಂಪುಟಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು. 1969ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಸಂಘಟನೆಯನ್ನು ಬಲಪಡಿಸಿ, 1972ರಿಂದ 1980ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಮಹತ್ವದ ಆಡಳಿತ ನಡೆಸಿದರು ಎಂದು ವಿವರಿಸಿದರು.
ದೇವರಾಜ ಅರಸು ಅವರ ಆಡಳಿತದಲ್ಲಿ ಜಾರಿಗೆ ಬಂದ ಭೂಸುಧಾರಣಾ ಕಾಯ್ದೆ ಕರ್ನಾಟಕದ ಸಾಮಾಜಿಕ-ಆರ್ಥಿಕ ಇತಿಹಾಸದಲ್ಲೇ ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಜಮೀನ್ದಾರರ ಹಿಡಿತದಲ್ಲಿದ್ದ ಭೂಮಿಯ ಮೇಲೆ ಉಳುಮೆ ಮಾಡುವ ಗೇಣಿದಾರರಿಗೆ ಹಕ್ಕು ದೊರೆಯುವಂತೆ ಮಾಡಿತು. ಇದರಿಂದ ಭೂಹೀನರು ಹಾಗೂ ಬಡ ರೈತರ ಬದುಕಿನಲ್ಲಿ ಮಹತ್ವದ ಬದಲಾವಣೆ ಉಂಟಾಯಿತು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಮಡಿಗಿನ ಬಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ ಐ.ಆರ್. ಅಕ್ಕಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವೆಂಕಟೇಶ್, ಸಿಡಿಪಿಓ ನಾಗರಾಜ್, ಅತಿಥಿಗಳಾದ ರಂಗನಾಥ ದೇಸಾಯಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪತ್ರಕರ್ತರು ಹಾಗೂ ವಿವಿಧ ಶಾಲೆ ಮತ್ತು ವಸತಿ ನಿಲಯಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇಲಾಖೆಯ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಲಾಯಿತು.