ಬಳ್ಳಾರಿ | ರಾಷ್ಟ್ರೀಯ ಅಂಕಿ ಅಂಶ ಕಚೇರಿಯ 75ನೇ ವರ್ಷಾಚರಣೆ ಅಂಗವಾಗಿ ಬೈಕ್ ರ‍್ಯಾಲಿ, ಜಾಗೃತಿ ಕಾರ್ಯಕ್ರಮ
ಬಳ್ಳಾರಿ : ಕೇಂದ್ರ ಸರ್ಕಾರದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯದ ಅಡಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಮಾದರಿ ಸಮೀಕ್ಷಾ ಕಚೇರಿ (ಕ್ಷೇತ್ರ ಕಾರ್ಯ ವಿಭಾಗ), ಉಪಪ್ರಾದೇಶಿಕ ಕಚೇರಿ ಬಳ್ಳಾರಿ ಇವರ ಸಹಯೋಗದಲ್ಲಿ ರಾಷ್ಟ್ರೀಯ ಮಾದರಿ ಸಮೀಕ್ಷೆಯ (ಎನ್‌ಎಸ್‌ಒ) ರಾಷ್ಟ್ರೀಯ ಅಂಕಿ ಅಂಶ ಕಚೇರಿಯ 75ನೇ ವರ್ಷಾಚರಣೆಯ ಅಂಗವಾಗಿ ಶುಕ್ರವಾರ ದಮ್ಮೂರು ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.
ರಾಷ್ಟ್ರೀಯ ಅಂಕಿ ಅಂಶ ಕಚೇರಿಯ ಸಮೀಕ್ಷೆಗಳ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬಳ್ಳಾರಿ ಉಪಪ್ರಾದೇಶಿಕ ಕಚೇರಿಯಿಂದ ದಮ್ಮೂರು ಗ್ರಾಮದವರೆಗೆ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು.
ಬಳಿಕ ಜಾಗೃತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಂಕಿ ಅಂಶ ಕಚೇರಿ ಅಧಿಕಾರಿಗಳು ಸಮೀಕ್ಷೆಗಳ ಮೂಲಕ ರಾಷ್ಟ್ರದ ಯೋಜನೆ ಮತ್ತು ನೀತಿ ರೂಪಣೆಗೆ ಅಗತ್ಯವಾದ ವಿಶ್ವಾಸಾರ್ಹ ಸಾಮಾಜಿಕ-ಆರ್ಥಿಕ ಮಾಹಿತಿಯನ್ನು ಸಂಗ್ರಹಿಸುವಲ್ಲಿ ರಾಷ್ಟ್ರೀಯ ಅಂಕಿ ಅಂಶ ಕಚೇರಿ ಪಾತ್ರವನ್ನು ದೃಶ್ಯ ಪ್ರದರ್ಶನದ ಮೂಲಕ ಗ್ರಾಮಸ್ಥರಿಗೆ ವಿವರಿಸಲಾಯಿತು.
ದಮ್ಮೂರು ಗ್ರಾಮದ ದುರ್ಗಮ್ಮ ದೇವಾಲಯದ ಆವರಣ, ಗ್ರಾಮ ಪಂಚಾಯತ್ ಕಚೇರಿ ಮತ್ತು ದಮ್ಮೂರು ವೆಂಕಪ್ಪ ತಾತ ಮಠದ ಆವರಣದಲ್ಲಿ ವೃಕ್ಷಾರೋಪಣಾ ಅಭಿಯಾನ ನಡೆಸಿ ಪರಿಸರ ಸಂರಕ್ಷಣೆ ಉಪಕ್ರಮದ ಅಂಗವಾಗಿ ದಮ್ಮೂರು ಗ್ರಾಮದ ನಿವಾಸಿಗಳಿಗೆ 200 ಸಸಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಅಂಕಿ ಅಂಶ ಕಚೇರಿ (ಕ್ಷೇತ್ರ ಕಾರ್ಯ ವಿಭಾಗ) ಅಧಿಕಾರಿಗಳು, ಹುಬ್ಬಳ್ಳಿ ಪ್ರಾದೇಶಿಕ ಕಚೇರಿಯ ನಿರ್ದೇಶಕ ಹರೀಶ್ವರನ್, ಜಿಲ್ಲಾ ಅಂಕಿಅಂಶಾಧಿಕಾರಿ ಪತ್ರಿಬಸಪ್ಪ ಸೇರಿದಂತೆ ಉಪಪ್ರಾದೇಶಿಕ ಕಚೇರಿಯ ಹಿರಿಯ ಅಂಕಿಅAಶಾಧಿಕಾರಿಗಳು ಹಾಗೂ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.