ಬಳ್ಳಾರಿ | ಕುಡತಿನಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರು ಮಾಡುವಂತೆ ಸಂಸದ ಈ ತುಕಾರಾಂಗೆ ಮನವಿ
ಕಂಪ್ಲಿ: ಕುಡತಿನಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರು ಮಾಡಲು ಹಣಕಾಸು ಇಲಾಖೆ ಅನುಮತಿ ನೀಡದಿರುವುದರಿಂದ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕುಡತಿನಿ ಪಟ್ಟಣದ ನಿವಾಸಿಗಳು ಸಂಸದ ಈ ತುಕಾರಾಂ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಟಿ.ಕೆ.ಕಾಮೇಶ್ ಮಾತನಾಡಿ, ಕುಡತಿನಿ ಪಟ್ಟಣವು ಮೂವತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಇದು ಹತ್ತಾರು ಹಳ್ಳಿಗಳ ಕೇಂದ್ರ ಸ್ಥಾನವಾಗಿದೆ. ಕುಡತಿನಿ ಪಟ್ಟಣದ ಸುತ್ತಮುತ್ತ ವಿದ್ಯುತ್ ಉತ್ಪಾದನೆ, ಕಬ್ಬಿಣ ಹಾಗೂ ಮೆದು ಕಬ್ಬಿಣ ಉತ್ಪಾದನೆಯ ಹಲವಾರು ಕಾರ್ಖಾನೆಗಳು ಪ್ರಾರಂಭಗೊಂಡಿವೆ. ಇವುಗಳಿಂದ ಹೊರಬಿಡುವ ವಿಷಾನಿಲ, ಕಪ್ಪು ಧೂಳು, ಕುಡತಿನಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಅಸ್ತಮಾ, ಕ್ಷಯ, ಕ್ಯಾನ್ಸರ್, ಗರ್ಭ ಕೋಶ ಸಮಸ್ಯೆ, ಚರ್ಮ ರೋಗ ಇತರೆ ಹಲವಾರು ಭಯಾನಕ ರೋಗಗಳು ಹರಡುತ್ತದೆ ಎಂದು ಹೇಳಿದರು.
ಈ ಭಾಗದ ಹಳ್ಳಿಗಳ ರೋಗಿಗಳಿಗೆ ಸಹಾಯವಾಗುವಂತೆ ಕೂಡಲೇ ಆಸ್ಪತ್ರೆಗೆ ಮೀಸಲಿರುವ ಜಮೀನಿನಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಸಂತಕುಮಾರ್, ತಿಪ್ಪೇಸ್ವಾಮಿ, ತಿಮ್ಮಪ್ಪ, ಮನೋಜ್, ಹನುಮಂತಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.