ಬಳ್ಳಾರಿ | ಸಾರ್ವಜನಿಕ ಸ್ಥಳದಲ್ಲಿ ಕಂಡುಬಂದ ನವಜಾತ ಶಿಶುಗಳನ್ನು ಸರಕಾರಿ ದತ್ತು ಕೇಂದ್ರಕ್ಕೆ ಒಪ್ಪಿಸಲು ಡಿಸಿ ಸೂಚನೆ
ಬಳ್ಳಾರಿ : ಸಾರ್ವಜನಿಕ ಸ್ಥಳದಲ್ಲಿ ನವಜಾತ ಶಿಶು ಕಂಡುಬಂದರೆ ಅವುಗಳನ್ನು ಸರ್ಕಾರದ ವಿಶೇಷ ದತ್ತು ಸಂಸ್ಥೆಗೆ ಒಪ್ಪಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ತಿಳಿಸಿದ್ದಾರೆ.
ಸಾರ್ವಜನಿಕರು ತಮ್ಮಲ್ಲಿ ಜನಿಸಿದ ಅಥವಾ ಅನಾಥ, ಪರಿತ್ಯಕ್ತವಾಗಿ ಬಿಟ್ಟ ಮಕ್ಕಳನ್ನು ಸ್ವೀಕರಿಸಲು ಬೇಡಿಕೆ ಇದ್ದರೆ, ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅಥವಾ ಜಿಲ್ಲಾಧಿಕಾರಿ ವಿಭಾಗದ ಅಧಿಕಾರಿಗಳು ಮಗುವನ್ನು ಸ್ವೀಕರಿಸಿ, ಕೇಂದ್ರೀಕೃತ ಸರ್ಕಾರಿ ದತ್ತು ಸಂಸ್ಥೆಯಲ್ಲಿ ದಾಖಲಿಸುತ್ತಾರೆ.
ಬಳ್ಳಾರಿ ನಗರದಲ್ಲಿ ಈ ಸಂಸ್ಥೆಯಾಗಿ ಕಂಟೋನ್ ಮೆಂಟ್ ಪ್ರದೇಶದ ಶಾಂತಿಧಾಮ ಆವರಣದ ಸರ್ಕಾರಿ ವಿಶೇಷ ದತ್ತು ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಈ ಪ್ರಕ್ರಿಯೆಯಲ್ಲಿ ಮಗುವಿನ ತಾಯಿ ಅಥವಾ ಪೋಷಕರಿಗೆ ಯಾವುದೇ ವಿಚಾರಣೆ ನಡೆಸಲಾಗುವುದಿಲ್ಲ.
ಸಾರ್ವಜನಿಕರು ಮಕ್ಕಳನ್ನು ಕಸದ ಬುಟ್ಟಿಗಳು, ರಸ್ತೆ ಬದಿಗಳು ಅಥವಾ ತಿಪ್ಪೆ ಗುಂಡಿಗಳಲ್ಲಿ ಬಿಟ್ಟು ಸಾವಿಗೆ ಕಾರಣರಾಗಬಾರದು. ಯಾವುದೇ ಭಯ ಅಥವಾ ಆತಂಕವಿಲ್ಲದೆ, ಬೇಡವಾದ ಮಕ್ಕಳನ್ನು 1098 ಸಹಾಯವಾಣಿಗೆ ಕರೆ ಮಾಡಿ ಒಪ್ಪಿಸಬೇಕು ಎಂದು ಅವರು ಸೂಚಿಸಿದ್ದಾರೆ.