×
Ad

ಬಳ್ಳಾರಿ | ರೈತರು ಬೆಳೆ ರೋಗ, ಕೀಟ ಪಸರಿಸದಂತೆ ಮುನ್ನೆಚ್ಚರಿಕೆ ಕ್ರಮವಹಿಸಿ

Update: 2025-08-21 18:49 IST

ಬಳ್ಳಾರಿ : ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಧಿಕ ಮಳೆಯಾಗುತ್ತಿದ್ದು, ಮೋಡ ಕವಿದ ವಾತವರಣ ಹಾಗೂ ತಾಪಮಾನ ಏರುಪೇರುನಿಂದ ತೋಟಗಾರಿಕೆ ಬೆಳೆಗಳ ಇಳುವರಿ ಮೇಲೆ ಪರಿಣಾಮ ಬೀರುವ ಸಾದ್ಯತೆಯಿದ್ದು, ರೈತರು ಈ ಸಂದರ್ಭದಲ್ಲಿ ರೋಗ ಮತ್ತು ಕೀಟ ಪಸರಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಮಗ್ರ ರೋಗ ಮತ್ತು ಕೀಟ ನಿಯಂತ್ರಣ ಪ್ರಕ್ರಿಯೆ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಬಳ್ಳಾರಿ, ಕುರುಗೋಡು ಮತ್ತು ಕಂಪ್ಲಿ ತಾಲ್ಲೂಕಿನಲ್ಲಿ ವಾಣಿಜ್ಯ ಬೆಳೆಯಾಗಿ ಮೆಣಸಿನಕಾಯಿ ಬೆಳೆ ಮತ್ತು ಹಣ್ಣಿನ ಬೆಳೆಗಳಾಗಿ ದಾಳಿಂಬೆ, ಪಪ್ಪಾಯ, ಅಂಜೂರ ಮತ್ತು ಸೀಬೆ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಸಾಂಬಾರು ಬೆಳೆಯಾದ ಮೆಣಸಿನಕಾಯಿ ಬೆಳೆಯನ್ನು ಅಂದಾಜು 28,000 ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ಮತ್ತು ಅಂಜೂರ ಬೆಳೆಯನ್ನು 484 ಹೆಕ್ಟೇರ್ ಗೂ ಅಧಿಕ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

ಪ್ರಸ್ತುತ ಸಾಲಿನ ವಾಯುಭಾರ ಕುಸಿತದಿಂದ ತಾಲ್ಲೂಕಿನಾದ್ಯಂತ ಅಧಿಕ ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣ ಇರುವುದರಿಂದ ರೈತರು ಮುಂಜಾಗ್ರತಾ ವಹಿಸಬೇಕು ಎಂದು ತಿಳಿಸಿದ್ದಾರೆ.

ಕೈಗೊಳ್ಳಬೇಕಾದ ಕ್ರಮಗಳು:

ಮೆಣಸಿನಕಾಯಿ ಬೆಳೆಯಲ್ಲಿ ಹಣ್ಣು ಕೊಳೆ ರೋಗ, ಕಾಯಿ ಕೊರಕ, ರಸ ಹೀರುವ ಕೀಟಗಳು (ಥ್ರಿಪ್ಸ್), ಗೊಣ್ಣೆಹುಳುಗಳು, ಸೊರಗು ರೋಗ, ಕಾಂಡ ಕೊರಕ ಹುಳುಗಳ ಬಾದೆ ಹೆಚ್ಚಾಗುತ್ತಿರುವ ಸಂಭವವಿದ್ದು, ರೈತರು ಥೈಯೂಮೆಥಾಕ್ಸಿಮ್ 0.5 ಗ್ರಾಂ ಅಥವಾ ಸ್ವೆನೋಸ್ಯಾಡ್ 0.25 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡಬಹುದು.

ದಾಳಿಂಬೆ ಬೆಳೆಯಲ್ಲಿ ಕಾಯಿ ಕೊಳೆ ರೋಗದ ಬಾದೆಗೆ ಕಾಪರ್ ಹೈಡ್ರಾಕ್ಸೆಡ್ 2 ಗ್ರಾಂ ಅಥವಾ ಜೈರಮ್ 2 ಗ್ರಾಂ ಆಥವಾ ಪ್ರೊಪಿನೆಬ್ 2.5 ಗ್ರಾಂ ಅಥವಾ ಕ್ಯಾಪ್ಟನ್ 2 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡಬಹುದು.

ಅಂಜೂರ ಬೆಳೆಯಲ್ಲಿ ಕಟಾವಿಗೆ ಬಂದಂತಹ ಹಣ್ಣುಗಳನ್ನು ಕೊಯ್ಲು ಮಾಡಿದ ನಂತರ ಗಿಡಗಳಿಗೆ ಹೆಕ್ಸಾಕೋನಾಜೋಲ್ 1ಮಿ.ಲೀ ಅಥವಾ ಡೈಫೆನ್-ಕೊನಜೋಲ್ 1ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡಬಹುದು.

ಪಪ್ಪಾಯ ಬೆಳೆಯಲ್ಲಿ ಬುಡ ಕೊಳೆ ರೋಗಕ್ಕೆ ಹೆಕ್ಸಾಕೋನಾಜೋಲ್ 2ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಬುಡದ ಸುತ್ತ ಹಾಕಬೇಕು. ಕಾಯಿ ಕೊಳೆ ರೋಗಕ್ಕೆ ಡೈಫೆನ್-ಕೊನಜೋಲ್ 1ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡುಬಹುದು.ಪೇರಲ/ಸೀಬೆ ಬೆಳೆಯಲ್ಲಿ ಹಣ್ಣಿನ ನೊಣದ ಬಾದೆಯ ಹತೋಟಿಗಾಗಿ ಪ್ರತಿ ಎಕರೆಗೆ 8 ರಿಂದ 10 ಮೊಹಕ ಬಲೆಗಳನ್ನು ಅಳವಡಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News