ಬಳ್ಳಾರಿ | ‘ಹರ್ ಘರ್ ತಿರಂಗಾ, ಹರ್ ಘರ್ ಸ್ವಚ್ಛತಾ, ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯದ ಉತ್ಸವ’ ಅಭಿಯಾನ
ಬಳ್ಳಾರಿ : 79ನೇ ಸ್ವಾತಂತ್ರ್ಯವ ದಿನಾಚರಣೆಯ ಅಂಗವಾಗಿ ಗ್ರಾಮೀಣ ಜನರಲ್ಲಿ ನೀರು ಮತ್ತು ನೈರ್ಮಲ್ಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಆ.15 ರವರೆಗೆ ಜಿಲ್ಲೆಯಲ್ಲಿ ‘ಹರ್ ಘರ್ ತಿರಂಗಾ, ಹರ್ ಘರ್ ಸ್ವಚ್ಛತಾ, ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯದ ಉತ್ಸವ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್ ಅವರು ತಿಳಿಸಿದ್ದಾರೆ.
ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯಗಳ ಜಂಟಿ ಸಹಯೋಗದಲ್ಲಿ ನಡೆಯುವ ಈ ಅಭಿಯಾನವು ನಾಗರಿಕರಲ್ಲಿ ಒಗ್ಗಟ್ಟಿನ ಮನೋಭಾವ ಬೆಳೆಸುವುದು, ಸ್ವಾತಂತ್ರ್ಯದ ಸಾರವನ್ನು ಸ್ವಚ್ಛತೆ ಮತ್ತು ಸುಜಲತೆ (ನೀರಿನ ಸದ್ಬಳಕೆ) ಗುರಿಗಳೊಂದಿಗೆ ಸಂಯೋಜಿಸುವುದು. ಇದು ನೀರು, ನೈರ್ಮಲ್ಯ ಮತ್ತು ಶುಚಿತ್ವ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷಿತ ಕುಡಿಯುವ ನೀರು, ಸುಸ್ಥಿರ ನೈರ್ಮಲ್ಯ ಮತ್ತು ಸುಧಾರಿತ ಶುಚಿತ್ವವನ್ನು ಖಚಿತಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಜಿಲ್ಲೆಯ ಎಲ್ಲಾ ತಾಲ್ಲೂಕು ಮತ್ತು ಗ್ರಾಮ ಪಂಚಾಯತ್ ಗಳ ಅಧಿಕಾರಿ, ಸಿಬ್ಬಂದಿಗಳು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಮತ್ತು ಸ್ಥಳೀಯ ಸಂಸ್ಥೆಗಳು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು, ಸ್ವ-ಸಹಾಯ ಸಂಘದ ಗುಂಪುಗಳು, ಪಂಚಾಯತ್ ರಾಜ್ ಸಂಸ್ಥೆಗಳು, ಶಾಲಾ ಮಕ್ಕಳು, ಸ್ವಯಂ-ಸೇವಕರು ಮತ್ತು ಮುಂಚೂಣಿ ಕಾರ್ಯಕರ್ತೆಯರು ಈ ಅಭಿಯಾನದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಪ್ರೋತ್ಸಾಹಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.