ಬಳ್ಳಾರಿ | ಜಿಲ್ಲಾ ನ್ಯಾಯಾಲಯದಲ್ಲಿ ‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 2.0’ ಬೃಹತ್ ಅಭಿಯಾನ
ಬಳ್ಳಾರಿ :ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಭಾರತದ ಸರ್ವೋಚ್ಚ ನ್ಯಾಯಾಲಯದ ಮಧ್ಯಸ್ಥಿಕೆ ಮತ್ತು ರಾಜಿ ಯೋಜನೆ ಸಮಿತಿಯ ನಿರ್ದೇಶನದಂತೆ, ಜಿಲ್ಲಾ ನ್ಯಾಯಾಲಯದಲ್ಲಿ ‘ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ 2.0’ ಎಂಬ 90 ದಿನಗಳ ಬೃಹತ್ ಮಧ್ಯಸ್ಥಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಜಿ. ಶಾಂತಿ ಅವರು ತಿಳಿಸಿದ್ದಾರೆ.
ಈ ಅಭಿಯಾನವು ಜ.2, 2026 ರಿಂದ ಆರಂಭಗೊಂಡಿದ್ದು, ಏಪ್ರಿಲ್ ತಿಂಗಳವರೆಗೆ ನಡೆಯಲಿದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ, ಶೀಘ್ರವಾಗಿ ಹಾಗೂ ಖರ್ಚಿಲ್ಲದೆ ಇತ್ಯರ್ಥಪಡಿಸಿಕೊಳ್ಳಲು ಇದು ಸಾರ್ವಜನಿಕರಿಗೆ ಸುವರ್ಣಾವಕಾಶವಾಗಿದೆ ಎಂದು ಅವರು ಹೇಳಿದರು.
ಮಧ್ಯಸ್ಥಿಕೆ ಎಂದರೇನು? :
ಮಧ್ಯಸ್ಥಿಕೆ ಎನ್ನುವುದು ಎರಡು ಅಥವಾ ಹೆಚ್ಚು ಪಕ್ಷಗಳ ನಡುವಿನ ವಿವಾದಗಳನ್ನು ಬಗೆಹರಿಸಲು ಬಳಸುವ ಪರ್ಯಾಯ ವಿವಾದ ಇತ್ಯರ್ಥ ವಿಧಾನವಾಗಿದೆ. ಈ ಪ್ರಕ್ರಿಯೆಯಲ್ಲಿ ತಟಸ್ಥ ವ್ಯಕ್ತಿಯಾಗಿರುವ ಮಧ್ಯಸ್ಥಗಾರ ಪಕ್ಷಗಳ ನಡುವೆ ಸಂವಹನ ಮತ್ತು ಮಾತುಕತೆಯ ಮೂಲಕ ಪರಸ್ಪರ ಒಪ್ಪಿಗೆಯ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತಾರೆ. ಮಧ್ಯಸ್ಥಗಾರರು ಯಾವುದೇ ತೀರ್ಪನ್ನು ಹೇರುವುದಿಲ್ಲ.
2025ರ ಜುಲೈ 1 ರಿಂದ ಅಕ್ಟೋಬರ್ ವರೆಗೆ ನಡೆದ ಮೊದಲ ಹಂತದ ಮಧ್ಯಸ್ಥಿಕೆ ಅಭಿಯಾನವು ಬಳ್ಳಾರಿ ಜಿಲ್ಲೆಯಲ್ಲಿ ಉತ್ತಮ ಯಶಸ್ಸು ಕಂಡಿದೆ.
ಉಭಯ ಪಕ್ಷಗಳು ಒಪ್ಪಿದಲ್ಲಿ, ಸಂಬಂಧಪಟ್ಟ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ತಮ್ಮ ಪ್ರಕರಣವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮಧ್ಯಸ್ಥಿಕೆ ಕೇಂದ್ರಕ್ಕೆ ವರ್ಗಾಯಿಸಬಹುದು. ಇಲ್ಲಿ ಅನುಭವಿ ಸಂಧಾನಕಾರರು ಗೌಪ್ಯವಾಗಿ ಮತ್ತು ಸೌಹಾರ್ದಯುತವಾಗಿ ವ್ಯಾಜ್ಯವನ್ನು ಬಗೆಹರಿಸುತ್ತಾರೆ.
ಉಚಿತ ಕಾನೂನು ನೆರವಿಗಾಗಿ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ 15100 ಗೆ ಕರೆ ಮಾಡಬಹುದು ಅಥವಾ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದು ಕೆ.ಜಿ. ಶಾಂತಿ ಅವರು ತಿಳಿಸಿದ್ದಾರೆ.