×
Ad

ಬಳ್ಳಾರಿ | ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆ

Update: 2025-07-25 22:37 IST

ಬಳ್ಳಾರಿ : ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿಗಳು ಮತ್ತು ಪೌರಕಾರ್ಮಿಕರಿಗೆ ದೊರಕಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಬೇಕು ಹಾಗೂ ಅವರಲ್ಲಿ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಚಂದ್ರಕಲಾ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿ ಸಭಾMಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಾಗೃತಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಏಜೆನ್ಸಿಗಳು ಪೌರಕಾರ್ಮಿಕರಿಗೆ ಅಗತ್ಯವಾದ ಸಮವಸ್ತ್ರ, ಗಮ್ ಬೂಟ್, ಕೈಗವಸು, ಮಾಸ್ಕ್ ಮತ್ತು ಇತರೆ ಸುರಕ್ಷಣಾ ಪರಿಕರಗಳನ್ನು ಸಮರ್ಪಕವಾಗಿ ನೀಡಬೇಕು. ಆರೋಗ್ಯ ನಿರೀಕ್ಷಕರು ಮತ್ತು ಮೇಸ್ತ್ರಿಗಳು ಸುರಕ್ಷತಾ ಪರಿಕರಗಳನ್ನು ಧರಿಸುವಂತೆ ಪ್ರೇರೇಪಿಸಬೇಕು ಹಾಗೂ ಏಜೆನ್ಸಿಗಳು ಮತ್ತು ಪೌರಸಂಸ್ಥೆಗಳು ಧರಿಸುವುದನ್ನು ಕಡ್ಡಾಯಗೊಳಿಸಬೇಕು. ಇಲ್ಲವಾದಲ್ಲಿ ಅನೇಕ ಆರೋಗ್ಯದ ಸಮಸ್ಯೆಗಳು ಉಂಟಾಗಿ ಗಂಭೀರವಾಗಿ ಪರಿಣಿಮಿಸುತ್ತವೆ ಎಂದು ಎಚ್ಚರಿಕೆ ನೀಡಿದರು.

ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳ ಆರೋಗ್ಯ ಬಹಳ ಮುಖ್ಯ. ಇವರು ನಗರವನ್ನು ಸ್ವಚ್ಚಗೊಳಿಸಿದಂತೆ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮೆಲ್ಲರ ಜವಾಬ್ದಾರಿ ಕೂಡ ಆಗಿದೆ ಎಂದರು.

ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿ:

ನ.7 ರಂದು ಅಂಬೇಡ್ಕರ್ ಅವರು ಶಾಲೆಗೆ ಸೇರಿದ ದಿನದ ಅಂಗವಾಗಿ ಎಸೆಸೆಲ್ಸಿ, ಪಿಯುಸಿ, ಉನ್ನತ ಶಿಕ್ಷಣ ಪಡೆದ ಪೌರಕಾರ್ಮಿಕರ ಮಕ್ಕಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಬೇಕು ಎಂದು ಹೇಳಿದರು.

ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ:

ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಪೌರಕಾರ್ಮಿಕರ ಸಭೆ ಕರೆದು ಅವರ ಸಮಸ್ಯೆಗಳನ್ನು ಆಲಿಸಬೇಕು. ಅವರ ಪುನರ್ವಸತಿಗಾಗಿ ಸರ್ಕಾರ ರೂಪಿಸಿರುವ ನೀತಿ-ನಿಯಮಗಳ ಅರಿವು ಮೂಡಿಸಬೇಕು. ಅಧಿಕಾರಿಗಳು ಕಾಯ್ದೆಯನ್ವಯ ಪೌರಕಾರ್ಮಿಕರಿಗೆ ಅಗತ್ಯ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಬೇಕು ಎಂದರು.

ಸಭೆಯಲ್ಲಿ ಮರಣಹೊಂದಿದ ಸಫಾಯಿ ಕರ್ಮಚಾರಿಗಳು, ಪೌರಕಾರ್ಮಿಕರ ವಿವಿಧ ಪ್ರಕರಣಗಳ ಕುರಿತು ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಫಾಯಿ ಕರ್ಮಚಾರಿ ವಿಭಾಗದ ಜಿಲ್ಲಾ ಮಟ್ಟದ ಜಾಗೃತಿ ಸಮಿತಿಯ ಸದಸ್ಯ ಕಂದಕೂರು ರಾಮುಡು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿಶಿಕಾಂತ್ ಶಿವಪುರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ರಾಘವೇಂದ್ರ ಗುರು ಸೇರಿದಂತೆ ವಿವಿಧ ನಗರಸಭೆ, ಪುರಸಭೆ ಮತ್ತು ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಪೌರಕಾರ್ಮಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News