ಬಳ್ಳಾರಿ | ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಸೇವೆಯ ಸದುಪಯೋಗ ಪಡೆದುಕೊಳ್ಳಿ : ಡಾ.ಯಲ್ಲಾ ರಮೇಶ್ ಬಾಬು
ಬಳ್ಳಾರಿ,ಡಿ.19 : ಜಿಲ್ಲೆಯ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಡಯಾಲಿಸಿಸ್ ಸೇವೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಶುಕ್ರವಾರ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ವಾರ್ಡ್ ಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಾ ಡಯಾಲಿಸಿಸ್ ಸೇವೆಗಳನ್ನು ಅರ್ಹ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಒದಗಿಸುವುದು ಮುಖ್ಯವಾಗಿದೆ ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾ ಆಸ್ಪತ್ರೆ, ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆ, ಹಾಗೂ ಸಂಡೂರು ತಾಲ್ಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರಗಳು ಉಚಿತವಾಗಿ ಡಯಾಲಿಸಿಸ್ ಸೇವೆ ಒದಗಿಸುತ್ತಿವೆ. ಹೊಸದಾಗಿ ಕುರುಗೋಡು ಹಾಗೂ ಕಂಪ್ಲಿ ತಾಲ್ಲೂಕುಗಳ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 2 ಡಯಾಲಿಸಿಸ್ ಕೇಂದ್ರಗಳು ಹೊಸದಾಗಿ ಅನುಮೋದನೆಯಾಗಿದ್ದು, ಡಯಾಲಿಸಿಸ್ ಸೇವೆಗಳು ಪ್ರಾರಂಭಿಸುವ ಹಂತದಲ್ಲಿದೆ ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಮಾತನಾಡಿ, ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ (ಬಿ.ಎಮ್.ಸಿ.ಆರ್.ಸಿ) ಯಲ್ಲಿ 100, ಜಿಲ್ಲಾ ಆಸ್ಪತ್ರೆ-50, ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆ-7, ಸಂಡೂರು ಸಾರ್ವಜನಿಕ ಆಸ್ಪತ್ರೆ-6 ಸೇರಿದಂತೆ ಒಟ್ಟು 163 ರೋಗಿಗಳು ಉಚಿತ ಡಯಾಲಿಸಿಸ್ ಸೇವೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೈದ್ಯರು, ಸಾರ್ವಜನಿಕರು ಹಾಗೂ ಇತರರು ಇದ್ದರು.