×
Ad

ಪ್ರಬುದ್ಧ ಭಾರತ ನಿರ್ಮಾಣ ಅಂಬೇಡ್ಕರ್‌ ಅವರ ಕನಸು: ಪ್ರೊ.ವಿಶ್ವನಾಥ

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ಎರಡು ದಿನಗಳ ‘ಪ್ರಬುದ್ಧ ಭಾರತ’ ಅಂತರರಾಷ್ಟ್ರೀಯ ಸಮ್ಮೇಳನ

Update: 2025-12-19 20:43 IST

ಬಳ್ಳಾರಿ,ಡಿ.19 : ಬುದ್ಧನ ವೈಚಾರಿಕತೆಯನ್ನು ಅಳವಡಿಸಿಕೊಂಡು ದೇಶದ ಅತಿದೊಡ್ಡ ಪಿಡುಗಾದ ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಪ್ರಬುದ್ಧ ಭಾರತ ನಿರ್ಮಿಸುವ ಕನಸನ್ನು ಡಾ.ಬಿ.ಆರ್ ಅಂಬೇಡ್ಕರ್ ಅವರು ಕಂಡಿದ್ದರು ಎಂದು ಡಾ.ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಶ್ವನಾಥ ಅವರು ಹೇಳಿದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್ ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಇನ್ಸಿ್ಟಟ್ಯೂಟ್ ಆಫ್ ಡಾ.ಬಿ.ಆರ್ ಅಂಬೇಡ್ಕರ್ ಟ್ರೇನಿಂಗ್, ರಿಸರ್ಚ್ ಆ್ಯಂಡ್ ಎಕ್ಸ್ಟೆನ್ಷಿಯನ್ ಸೆಂಟರ್, ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿರುವ ಎರಡು ದಿನಗಳ ‘ಪ್ರಬುದ್ಧ ಭಾರತ’ ಅಂತರರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಪಂಚಾಯಿತಿಗಳಿಂದ ಪಾರ್ಲಿಮೆಂಟಿನವರೆಗೂ ಜಾತಿ ಆಧಾರದ ಮೇಲೆ ಜನನಾಯಕರ ಆಯ್ಕೆಯಾಗುತ್ತದೆ. ಭಾರತದಂತಹ ಜ್ಯಾತ್ಯಾತೀತ ರಾಷ್ಟ್ರದಲ್ಲಿ ಅಸ್ಪ್ರಶ್ಯತೆ ಎಂಬುದು ಇಂದಿಗೂ ಕಾಣಸಿಗುತ್ತದೆ. ಜಾತಿ ಸಂಕೋಲೆಯನ್ನು ತೊಡೆದು ಹಾಕಲು ಬಾಬಾಸಾಹೇಬರು ಬುದ್ಧನ ಮಾರ್ಗವನ್ನು ಅನುಸರಿಸಿದರು ಎಂದು ತಿಳಿಸಿದರು.\

ಚಿತ್ರನಟ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಚೇತನ್ ಕುಮಾರ್ ಸಮ್ಮೇಳನದ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡುತ್ತಾ, ಶಿಕ್ಷಣ ಎಂಬ ಅಸ್ತ್ರದ ಮೂಲಕ ಪ್ರಬುದ್ಧ ಭಾರತ ನಿರ್ಮಾಣ ಅಂಬೇಡ್ಕರ್ ಅವರ ಚಿಂತನೆಯಾಗಿತ್ತು. ಇದಕ್ಕಾಗಿಯೇ 1956ರಲ್ಲಿ ಅವರು ‘ಪ್ರಬುದ್ಧ ಭಾರತ’ ಎಂಬ ಪತ್ರಿಕೆಯನ್ನು ಆರಂಭಿಸಿ ಸಮಾನತೆಯ ಸಂದೇಶವನ್ನು ದೇಶದೆಲ್ಲೆಡೆ ಹರಡಲು ಯತ್ನಿಸಿದರು ಎಂದು ಹೇಳಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು, ಸಮಾನತೆಯ ಹರಿಕಾರರಾದ ಅಂಬೇಡ್ಕರ್ ಅವರು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿರಲಿಲ್ಲ. ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಶಿಕ್ಷಣ ಪಡೆಯಲು ಎಲ್ಲರೂ ಅರ್ಹರು ಎಂದು ಜಗತ್ತಿಗೆ ತೋರಿಸಿಕೊಟ್ಟವರು ಎಂದು ನೆನೆದರು.

ರಾಜ್ಯ ಲೆಕ್ಕಪರಿಶೋಧನ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಶಿವರುದ್ರಪ್ಪ ವೇದಿಕೆಯಲ್ಲಿದ್ದರು. ವಿವಿಯ ಪ್ರಭಾರ ಕುಲಸಚಿವರಾದ ಪ್ರೊ.ತಿಪ್ಪೇರುದ್ರಪ್ಪ ಜೆ ಅತಿಥಿಗಳನ್ನು ಸ್ವಾಗತಿಸಿದರು. ಕುಲಸಚಿವರು (ಮೌಲ್ಯಮಾಪನ) ಪ್ರೊ.ಎನ್.ಎಂ ಸಾಲಿ ವಂದಿಸಿದರು.

ಸಮ್ಮೇಳನದ ಸಂಚಾಲಕರಾದ ಪ್ರೊ.ಗೌರಿ ಮಾಣಿಕ್ ಮಾನಸ ಸಮ್ಮೇಳನದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸುಷ್ಮಾ ಜೋಗನ್ ನಿರೂಪಿಸಿದರು. ದೇಶದ ವಿವಿಧ ರಾಜ್ಯಗಳಿಂದ 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ವಿಶ್ವವಿದ್ಯಾಲಯದ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರುಗಳು, ಬೋಧಕ-ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News