×
Ad

ಬಳ್ಳಾರಿ | ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಪ್ರಾರಂಭ : ಡಿಸಿ ನಾಗೇಂದ್ರ ಪ್ರಸಾದ್ ಕೆ.

ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆ

Update: 2025-12-19 20:21 IST

ಬಳ್ಳಾರಿ, ಡಿ.19: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ (FAq) ಗುಣಮಟ್ಟದ ತೊಗರಿ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ತಿಳಿಸಿದ್ದಾರೆ.

ನಗರದ ನೂತನ ಜಿಲ್ಲಾಡಳಿತ ಭವನದ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ 2025–26ನೇ ಸಾಲಿನ ಮುಂಗಾರು ಹಂಗಾಮಿನ ತೊಗರಿ ಉತ್ಪನ್ನವನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ರಾಜ್ಯ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ರೈತರಿಂದ ತೊಗರಿ ಖರೀದಿ ನಡೆಸಲಾಗುವುದು ಎಂದು ಹೇಳಿದರು.

ಪ್ರತಿ ಕ್ವಿಂಟಾಲ್‌ಗೆ 8,000 ರೂ. ಬೆಂಬಲ ಬೆಲೆ ನಿಗದಿಪಡಿಸಲಾಗಿದ್ದು, ಪ್ರತಿ ಎಕರೆಗೆ ಗರಿಷ್ಠ 4 ಕ್ವಿಂಟಾಲ್‌ಗಳಂತೆ ಫ್ರೂಟ್ಸ್ ತಂತ್ರಾಂಶದಲ್ಲಿ ಲಭ್ಯವಾಗುವ ಮಾಹಿತಿಯ ಆಧಾರದ ಮೇಲೆ ರೈತರಿಂದ ತೊಗರಿ ಖರೀದಿಸಲಾಗುತ್ತದೆ. ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ಫ್ರೂಟ್ಸ್ ತಂತ್ರಾಂಶದ ಆಧಾರದಲ್ಲಿ ಖರೀದಿ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರೈತರ ನೋಂದಣಿ ಕಾರ್ಯವು 80 ದಿನಗಳವರೆಗೆ ನಡೆಯಲಿದ್ದು, ಖರೀದಿ ಪ್ರಕ್ರಿಯೆ 90 ದಿನಗಳವರೆಗೆ ಜಾರಿಯಲ್ಲಿರಲಿದೆ. ಖರೀದಿ ಪ್ರಕ್ರಿಯೆಗೆ ಅಗತ್ಯವಿರುವ ಗೋದಾಮುಗಳನ್ನು ಶುದ್ಧವಾಗಿ ನಿರ್ವಹಿಸಬೇಕು. ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಖರೀದಿ ಕೇಂದ್ರಗಳ ಸ್ಥಾಪನೆಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ತೂಕ ಪ್ರಮಾಣೀಕರಣ ಸೇರಿದಂತೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಪೂರ್ಣಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಖರೀದಿ ಕೇಂದ್ರಗಳಲ್ಲಿ ರೈತರು ನೋಂದಣಿ ಮಾಡಿಸುವಾಗ ಆಧಾರ್ ಕಾರ್ಡ್, ಪಹಣಿ ಪತ್ರಿಕೆ ಹಾಗೂ ಆಧಾರ್ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕಿನ ಪಾಸ್‌ಬುಕ್ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು. ಪಿ.ಓ.ಎಸ್ ಯಂತ್ರದ ಮೂಲಕ ನೋಂದಣಿ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಆಧಾರ್ ಬಯೋಮೆಟ್ರಿಕ್ ಪಡೆಯುವುದು ಕಡ್ಡಾಯವಾಗಿದ್ದು, ರೈತರು ಸಹಕರಿಸುವಂತೆ ಮನವಿ ಮಾಡಿದರು.

ಅದೇ ರೀತಿ, ರೈತರು ತಮ್ಮ ಫ್ರೂಟ್ಸ್ ಐ.ಡಿ ಯೊಂದಿಗೆ ಹತ್ತಿರದ ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳುವ ಕುರಿತು ಅಗತ್ಯ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಡಿಬಿಟಿ ಮೂಲಕ ಹಣ ಜಮೆಯಾಗುವುದರಿಂದ, ಎಫ್ಐಡಿ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯವಾಗಿ ಮಾಡಿಕೊಳ್ಳುವಂತೆ ರೈತರಿಗೆ ಹೇಳಿದರು.

ಸಭೆಯಲ್ಲಿ ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕ ಓಂಕಾರಯ್ಯ, ಕೃಷಿ ಜಂಟಿ ನಿರ್ದೇಶಕ ಸೋಮಸುಂದರ್, ಸಹಕಾರ ಇಲಾಖೆಯ ಉಪನಿಬಂಧಕ ವೀರಭದ್ರಯ್ಯ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕ ಮನೋಜ್ ಕುಮಾರ್ ಸೇರಿದಂತೆ ವಿವಿಧ ಖರೀದಿ ಏಜೆನ್ಸಿಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News