×
Ad

ಬಳ್ಳಾರಿ | ತಾಲ್ಲೂಕು ಪಂಚಾಯತ್‌ನ 1ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

Update: 2025-07-21 21:33 IST

ಬಳ್ಳಾರಿ : ಇಲಾಖೆಗಳ ವಿವಿಧ ಯೋಜನೆಗಳಡಿ ಸೌಲಭ್ಯಗಳು, ಕೃಷಿ ಹಾಗೂ ಇತರೆ ಇಲಾಖೆಗಳ ಸಾಮಾಗ್ರಿ-ಸಲಕರಣೆಗಳು ಜನರಿಗೆ ವಿತರಿಸಲು ಸರ್ಕಾರ ಗುರಿ ನಿಗದಿಪಡಿಸುವುದಕ್ಕಿಂತ ಮುಂಚೆಯೇ ಜನರಿಗೆ ಯಾವ ಸೌಲಭ್ಯ ನೀಡಬೇಕು ಎನ್ನುವುದರ ಕುರಿತು ಆಯಾ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಹೇಳಿದರು.

ನಗರದ ಕೋಟೆ ಪ್ರದೇಶದ ತಾಲ್ಲೂಕು ಪಂಚಾಯತ್ ಕಾರ್ಯಾಲಯದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಬಳ್ಳಾರಿ ತಾಲ್ಲೂಕಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಸೇರಿದಂತೆ) 1ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಜನರಿಗೆ ಯಾವ ಯಾವ ಸೌಲಭ್ಯ ನೀಡಬೇಕು ಎಂದು ಗಮನಿಸಬೇಕು. ಸರ್ಕಾರದಲ್ಲಿ ಅಗತ್ಯಕ್ಕಿಂತ ಸಾಕಷ್ಟು ಅನುದಾನ ಲಭ್ಯವಿದೆ. ಸರ್ಕಾರ ಅನುದಾನ ಬಿಡುಗಡೆವರೆಗೆ ಅಧಿಕಾರಿಗಳು ಕಾಯುವುದು ಬೇಡ. ನಿಮ್ಮ ಇಲಾಖೆಗಳಿಗೆ ಏನು ಬೇಕು ಅದರ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬಳ್ಳಾರಿ ತಾಲ್ಲೂಕು ವ್ಯಾಪ್ತಿಯಲ್ಲಿ ಜಲ್ ಜೀವನ್ ಮಿಷನ್ ಯೋಜನೆಯಡಿ ಕೈಗೆತ್ತಿಕೊಂಡಿರುವ ವಿವಿಧ ಬ್ಯಾಚ್‌ಗಳ ಕಾಮಗಾರಿಗಳನ್ನು ಗುಣಮಟ್ಟತೆಯಿಂದ ಪೂರ್ಣಗೊಳಿಸಬೇಕು. ಕೆರೆಗಳನ್ನು ಸ್ವಚ್ಛಗೊಳಿಸಬೇಕು. ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಸಭೆಗೂ ಮುನ್ನ ಗ್ಯಾರಂಟಿ ಯೋಜನೆಯ ಯುವನಿಧಿಯ ಮೂರನೇ ವರ್ಷದ ನೋಂದಣಿ ಪ್ರಕ್ರಿಯೆ ಮಾಹಿತಿ ಕುರಿತ ಭಿತ್ತಿಚಿತ್ರ ಮತ್ತು ಡಿಎಪಿ ರಸಗೊಬ್ಬರ ಬಳಕೆ ಬದಲಾಗಿ ಸಂಯುಕ್ತ ರಸಗೊಬ್ಬರ ಬಳಕೆ ಮಾಡುವ ಕುರಿತ ಮಾಹಿತಿ ಭಿತ್ತಿಚಿತ್ರ ಗಣ್ಯರು ಅನಾವರಣಗೊಳಿಸಿದರು.

ಈ ವೇಳೆ ಬಳ್ಳಾರಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಗೋನಾಳ್ ಎಂ.ನಾಗಭೂಷಣ ಗೌಡ, ಬಳ್ಳಾರಿ ತಾಪಂ ಆಡಳಿತಾಧಿಕಾರಿಯೂ ಆದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದ, ಬಳ್ಳಾರಿ ತಾಪಂ ಇಓ ಶ್ರೀಧರ್ ಐ ಬಾರಿಕಾರ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News