ಬಳ್ಳಾರಿ | ನಡವಿ ಗ್ರಾಮದಲ್ಲಿ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ
ಬಳ್ಳಾರಿ : ಪ್ರಮುಖ ಆದಾಯದ ಮೂಲಗಳಲ್ಲಿ ಮೀನುಗಾರಿಕೆ ಕೂಡ ಒಂದು. ಈ ಉದ್ಯಮ ನಂಬಿಕೊಂಡು ಸಾಕಷ್ಟು ಕುಟುಂಬಗಳು ಜೀವನ ನಡೆಸುತ್ತಿದಾರೆ. ಮೀನು ಕೃಷಿಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ರಾಷ್ಟ್ರೀಯ ಮೀನು ಕೃಷಿಕರ ದಿನವನ್ನು ಆಚರಿಸಲಾಗುತ್ತದೆ ಎಂದು ಮೀನುಗಾರಿಕೆ ಜಂಟಿ ನಿರ್ದೇಶಕ ಷಡಾಕ್ಷರಿ ಅವರು ಹೇಳಿದರು.
ಮೀನುಗಾರಿಕೆ ಇಲಾಖೆ ವತಿಯಿಂದ ಸಿರುಗುಪ್ಪ ತಾಲ್ಲೂಕಿನ ನಡವಿ ಗ್ರಾಮದ ವೆಂಕಟಕೃಷ್ಣ ಮೀನುಮರಿ ಪಾಲನಾ ಕೇಂದ್ರದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ-2025 ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮೀನು ಸಾಕಾಣಿಕೆ ಮತ್ತು ಮೀನುಗಾರಿಕೆಯಲ್ಲಿ ವೈಜ್ಞಾನಿಕ ವಿಧಾನಗಳು, ತಂತ್ರಗಳ ಬಳಕೆಯನ್ನು ಉತ್ತೇಜಿಸುವುದು. ಆಧುನಿಕ ತಂತ್ರಜ್ಞಾನ ಮತ್ತು ಜ್ಞಾನದ ಬಗ್ಗೆ ರೈತರಿಗೆ ಅರಿವು ಮೂಡಿಸುವುದು. ಮೀನು ಉತ್ಪಾದನೆ ಹೆಚ್ಚಿಸುವ ಮೂಲಕ ದೇಶದ ಆಹಾರ ಭದ್ರತೆಯನ್ನು ಬಲಪಡಿಸುವುದು ದಿನದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಮೀನು ಕೃಷಿಯಲ್ಲಿ ಪ್ರಗತಿ ಹೊಂದಿದ ಮೀನು ಕೃಷಿಕರನ್ನು, ಮೀನುಗಾರರ ಸಹಕಾರ ಸಂಘ/ಸಂಸ್ಥೆಗಳ ಅಧ್ಯಕ್ಷರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಮೀನುಗಾರಿಕೆ ಉಪನಿರ್ದೇಶಕ ಶಿವಣ್ಣ, ಸಂಡೂರು ಮೀನುಗಾರಿಕೆ ಸಹಾಯಕ ನಿರ್ದೇಶಕ ಕೆ.ಎಸ್.ಮಂಜುನಾಥ, ಬಳ್ಳಾರಿ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕಿ ಬಿ.ಭಾವನ ಸೇರಿದಂತೆ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷರು, ಮೀನುಗಾರರು, ಮೀನು ಕೃಷಿಕರು ಹಾಗೂ ಇತರರು ಉಪಸ್ಥಿತರಿದ್ದರು.