ಸರ್ಕಾರಿ ಶಾಲೆಗಳಲ್ಲಿ ಪಿಎಂ ಪೋಷಣ್ ಯೋಜನೆ ಸಮರ್ಪಕ ಜಾರಿ: ಸಂಡೂರು ತಾಲೂಕಿನ ಶಾಲೆಗಳಿಗೆ ಹಿರಿಯ ಸಹಾಯಕ ನಿರ್ದೇಶಕ ಹರೀಶ್ ಎಚ್.ಆರ್.ಸಿ. ಭೇಟಿ

Update: 2026-07-30 20:28 IST

ಸಂಡೂರು/ ಬಳ್ಳಾರಿ: ಸರ್ಕಾರಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಪೌಷ್ಟಿಕ ಆಹಾರವನ್ನು ಸಮರ್ಪಕವಾಗಿ ಒದಗಿಸುವ ಉದ್ದೇಶದಿಂದ ಜಾರಿಯಲ್ಲಿರುವ ಪಿಎಂ ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ಅನುಷ್ಠಾನವನ್ನು ಪರಿಶೀಲಿಸಲು ಬೆಂಗಳೂರು ಆಯುಕ್ತರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕರಾದ ಹರೀಶ್ ಎಚ್.ಆರ್.ಸಿ. ಅವರು ಸಂಡೂರು ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು.

ತಾಲೂಕಿನ ತಾರನಗರ, ತೋರಣಗಲ್ಲು, ವಡ್ಡು ಹಾಗೂ ನಿಡುಗುರ್ತಿ ಗ್ರಾಮದ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ ಅವರು, ಶಾಲೆಗಳಲ್ಲಿ ಪಿಎಂ ಪೋಷಣ್ ಯೋಜನೆಯ ಅನುಷ್ಠಾನ, ಆಹಾರದ ಗುಣಮಟ್ಟ, ಸ್ವಚ್ಛತೆ, ಆಹಾರ ತಯಾರಿಕಾ ವಿಧಾನ, ಆಹಾರ ಸಂಗ್ರಹಣೆ, ಅಡುಗೆಮನೆಗಳ ನಿರ್ವಹಣೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಅಡುಗೆ ಸಿಬ್ಬಂದಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರೊಂದಿಗೆ ಸಭೆ ನಡೆಸಿದ ಹರೀಶ್ ಎಚ್.ಆರ್.ಸಿ. ಅವರು, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪೌಷ್ಟಿಕ ಹಾಗೂ ಗುಣಮಟ್ಟದ ಆಹಾರವನ್ನು ನಿಯಮಾನುಸಾರ ಸಿದ್ಧಪಡಿಸಿ ವಿತರಿಸಬೇಕು ಎಂದು ಸೂಚಿಸಿದರು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ ಪೋಷಣ್ ಯೋಜನೆಯ ಉದ್ದೇಶ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಮರ್ಪಕ ಪೌಷ್ಟಿಕಾಂಶ ದೊರೆಯುವಂತಾಗಿದ್ದು, ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು.

ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಅವರ ಆರೋಗ್ಯ ಮತ್ತು ಪೌಷ್ಟಿಕತೆಯನ್ನೂ ಸಮಾನವಾಗಿ ಕಾಪಾಡುವ ಜವಾಬ್ದಾರಿ ಶಾಲೆಗಳ ಮೇಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಆಹಾರದ ಗುಣಮಟ್ಟ, ಮೆನು ಪಾಲನೆ, ಸ್ವಚ್ಛತೆ ಹಾಗೂ ವಿದ್ಯಾರ್ಥಿಗಳ ತೃಪ್ತಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಲಹೆ ನೀಡಿದರು.

ಪರಿಶೀಲನೆ ವೇಳೆ ರಾಜ್ಯದಲ್ಲಿಯೇ ವಿಶೇಷವಾಗಿ ಸಂಡೂರು ತಾಲೂಕಿನಲ್ಲಿ ಮಾತ್ರ ಜಾರಿಯಲ್ಲಿರುವ ಮಕ್ಕಳಿಗೆ ಸಂಜೆ ವೇಳೆಯಲ್ಲಿ ನೀಡುವ ವಿಶೇಷ "ಉಸಿಲು ಕಾಳು" ಯೋಜನೆಯ ಅನುಷ್ಠಾನವನ್ನೂ ಅವಲೋಕಿಸಿದರು. ಈ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪೌಷ್ಟಿಕಾಂಶ ಒದಗಿಸುವ ಪ್ರಯತ್ನ ಶ್ಲಾಘನೀಯವಾಗಿದ್ದು, ಅದರ ನಿರ್ವಹಣೆ ಹಾಗೂ ಫಲಾನುಭವಿಗಳಿಂದ ಪ್ರತಿಕ್ರಿಯೆಯನ್ನು ಪಡೆದು ಮಾಹಿತಿ ಸಂಗ್ರಹಿಸಿದರು.

ಶಾಲೆಗಳ ದಾಖಲೆಗಳು, ವಿದ್ಯಾರ್ಥಿಗಳ ಹಾಜರಾತಿ, ಆಹಾರ ಸಾಮಗ್ರಿಗಳ ದಾಸ್ತಾನು, ಗುಣಮಟ್ಟ ನಿಯಂತ್ರಣ ಹಾಗೂ ಅಡುಗೆ ಸಿಬ್ಬಂದಿಯ ಕಾರ್ಯನಿರ್ವಹಣೆಯನ್ನೂ ಪರಿಶೀಲಿಸಿ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.

ಈ ಪರಿಶೀಲನಾ ಕಾರ್ಯಕ್ರಮದಲ್ಲಿ ಸಂಡೂರು ತಾಲೂಕಿನ ಪಿಎಂ ಪೋಷಣ್ ಯೋಜನೆಯ ಸಹಾಯಕ ನಿರ್ದೇಶಕರಾದ ಶ್ರೀಧರ್ ಮೂರ್ತಿ, ಬಿಆರ್‌ಸಿ ಶರಣಬಸಪ್ಪ ಕರಿಶೆಟ್ಟಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದು, ವಿವಿಧ ಶಾಲೆಗಳ ಪರಿಶೀಲನಾ ಕಾರ್ಯಕ್ಕೆ ಸಹಕರಿಸಿದರು.

ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಪಿಎಂ ಪೋಷಣ್ ಯೋಜನೆಯ ಪರಿಣಾಮಕಾರಿ ಅನುಷ್ಠಾನ, ವಿದ್ಯಾರ್ಥಿಗಳ ಆರೋಗ್ಯಕರ ಬೆಳವಣಿಗೆ ಹಾಗೂ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಇಂತಹ ಮೇಲ್ಮಟ್ಟದ ಪರಿಶೀಲನೆಗಳು ಮತ್ತಷ್ಟು ಸಹಕಾರಿಯಾಗಲಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News