ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರದ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಶಾಸಕ ರಾಘವೇಂದ್ರ ಹಿಟ್ನಾಳ್ ಆಯ್ಕೆ
ಬಳ್ಳಾರಿ : ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಒಳಗೊಂಡ ಹಾಲು ಒಕ್ಕೂಟಕ್ಕೆ ನೂತನ ಅಧ್ಯಕ್ಷರಾಗಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷ ಸ್ಥಾನಕ್ಕೆ ಸತ್ಯನಾರಾಯಣ ನಾಮಪತ್ರ ಸಲ್ಲಿಸಿದ್ದರಿಂದ ಇನ್ನುಳಿದ ಯಾರೂ ಕೂಡ ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿ ಪ್ರಮೋದ್ ಅವರು ಘೋಷಿಸಿದ್ದಾರೆ.
ಕೆಎಂಎಫ್‌ನ ಮಾಜಿ ಅಧ್ಯಕ್ಷ ಭೀಮ ನಾಯ್ಕ ಅವರು ಚುನಾವಣೆಯಿಂದ ಹಿಂದೇಟು ಹಾಕಿದ್ದರಿಂದ ಒಕ್ಕೂಟದ ಒಟ್ಟು 12 ನಿರ್ದೇಶಕ ಸ್ಥಾನಗಳಲ್ಲಿ ಹಿಟ್ನಾಳ್ ಬಣದವರು 7 ಮತ್ತು ಭೀಮ ನಾಯ್ಕ ಬಣದವರು 5 ಸ್ಥಾನಗಳಲ್ಲಿ ಬಲ ಹೊಂದಿದ್ದರು. ಇದಲ್ಲದೇ, ಸರ್ಕಾರ ಹಿಟ್ನಾಳ್ ಅವರನ್ನು ಎರಡು ದಿನಗಳ ಹಿಂದಷ್ಟೇ ಒಕ್ಕೂಟದ ನಾಮ ನಿರ್ದೇಶಿತ ಸದಸ್ಯನಾಗಿ ನೇಮಿಸಿತ್ತು. ಈ ಮೂಲಕ ಅವರ ಸಂಖ್ಯಾ ಬಲ 8ಕ್ಕೆ ಏರಿಕೆಯಾಗಿತ್ತು.
ಹಿಟ್ನಾಳ್ ಅವರಿಗೆ ಬಳ್ಳಾರಿಯ ಕೆಲವು ಶಾಸಕರ, ಉನ್ನತ ಮಟ್ಟದ ನಾಯಕರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಬೆಂಬಲವೂ ಇದ್ದು, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ಹಿಟ್ನಾಳ್ ಬಣದ ನಿರ್ದೇಶಕರಿಗೆ ಆತಿಥ್ಯ ವಹಿಸಿದ್ದರು ಎನ್ನಲಾಗಿದೆ.
ರಾ,ಬ,ಕ,ವಿ ಹಾಲು ಒಕ್ಕೂಟದ ನೂತನ ಅಧ್ಯಕ್ಷ ಹೆಸರು ಪ್ರಸ್ತಾಪ ಆಗುತ್ತಿದ್ದಂತೆ ರಾಘವೇಂದ್ರ ಹಿಟ್ನಾಳ್ಪ ಪರ ಬೆಂಬಲಿಗರು ಘೋಷಣೆ ಕೂಗಿ ಸಂಭ್ರಮ ಆಚರಿಸಿದರು.