×
Ad

Ballari | ಬಿಜೆಪಿ ಕಚೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ ವೇಳೆ ಗಾಂಧಿ, ಅಂಬೇಡ್ಕರ್ ಪೋಟೋ ಕಡೆಗಣನೆ: ಭೀಮ್ ಆರ್ಮಿ ಆರೋಪ

Update: 2026-01-26 18:55 IST

ಬಳ್ಳಾರಿ: 77ನೇ ಗಣರಾಜ್ಯೋತ್ಸವ ಹಿನ್ನಲೆ ಬಿಜೆಪಿ ಕಚೇರಿಯಲ್ಲಿ ನಡೆದ ಧ್ವಜಾರೋಹಣ ಸಂದರ್ಭ ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆ‌ರ್.ಅಂಬೇಡ್ಕರ್ ಅವರ ಫೋಟೋಗೆ ಬಿಜೆಪಿ ಕಚೇರಿಯಲ್ಲಿ ಗೌರವ ಸಲ್ಲಿಸಿಲ್ಲ ಎಂದು ಭೀಮ್ ಆರ್ಮಿಯ ಸದಸ್ಯರು ಆರೋಪಿಸಿದ್ದಾರೆ.

ನಗರದ ವಾಜಪೇಯಿ ಬಡಾವಣೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಧ್ವಜಾರೋಹಣದಲ್ಲಿ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ಧ್ವಜಾರೋಹಣ ನಂತರ ಬಿಜೆಪಿ ಪಕ್ಷ ಮತ್ತು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಫೋಟೋಗಳಲ್ಲಿ ಅಂಬೇಡ್ಕರ್ ಅವರ ಪೋಟೋ ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಪೋಟೋ ಕಡೆಗಣಿಸಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಭೀಮ್ ಆರ್ಮಿ ಸಂಘಟನೆ ಮುಖಂಡ ರಘು ಎಂಬುವವರು ಬಿಜೆಪಿ ಪಕ್ಷದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಅವರ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಮಾಜಿ ಶಾಸಕ ಸೋಮಶೇಖರ್ ರೆಡ್ಡಿ


 


ಆಡಿಯೋದಲ್ಲೇನಿದೆ?

ಭೀಮ್ ಆರ್ಮಿ ಸದಸ್ಯ ರಘು ಎಂಬವರು ಧ್ವಜಾರೋಹಣ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಪೋಟೋ ಕಡೆಗಣಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ ಇದಕ್ಕೆ ಉತ್ತರಿಸಿದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಅವರು, "ಅಂಬೇಡ್ಕರ್ ಅವರ ಬಗ್ಗೆ ನಮಗೆ ಅಪಾರ ಗೌರವ ಇದೆ. ಕಚೇರಿ ಒಳಗಡೆ ಅವರ ಫೋಟೋಗೆ ಗೌರವ ಸಲ್ಲಿಸಿದ್ದೇವೆ" ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಇದಕ್ಕೆ ಮರು ಉತ್ತರಿಸಿದ ಭೀಮ್ ಆರ್ಮಿ ಸದಸ್ಯ ರಘು ಧ್ವಜಾರೋಹಣ ವೇಳೆ ಅಂಬೇಡ್ಕರ್ ಪೋಟೋ ಇಟ್ಟಿಲ್ಲ ಎಂದು ಮರು ಪ್ರಶ್ನಿಸಿದ್ದಾರೆ ಈ ಆಡಿಯೋ ಸಾಮಾಜಿಕ ಮಾಧ್ಯಮ ಗಳಲ್ಲಿ ಹರಿದಾಡುತ್ತಿದೆ.

ಈ ಬಗ್ಗೆ ಸ್ಪಷ್ಟೀಕರಣ ಕೇಳಲು ವಾರ್ತಾ ಭಾರತಿ ಪ್ರತಿನಿಧಿ ದೂರವಾಣಿ ಕರೆ ಮೂಲಕ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಅವರಿಗೆ ಕರೆ ಮಾಡಿದಾಗ ದೂರವಾಣಿ ಕರೆ ಸ್ವೀಕರಿಸಲಿಲ್ಲ.

ನಮ್ಮ ಸಂವಿಧಾನವನ್ನು ಅಳಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಸಂವಿಧಾನದ ಆಶಯದಲ್ಲೇ ಇಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರ ನಡೆಯುತ್ತಿದೆ. ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಇದು ಸಂವಿಧಾನಕ್ಕೆ ಅವಮಾನ ಮಾಡಿದಂತೆ ಎಂದು ಭೀಮ್ ಆರ್ಮಿಯ ಮುಖಂಡ ರಘು ಟೀಕಿಸಿದ್ದಾರೆ.


ಭೀಮ್ ಆರ್ಮಿ ಸದಸ್ಯ ರಘು


 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News